ಜನರ ಬಳಿ ಹೋಗುವುದೇ ನಿಜವಾದ ಪ್ರಜಾಪ್ರಭುತ್ವ

ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕಟ್ಟೇರಿ ಗ್ರಾಮಸ್ಥರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು.
ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕಟ್ಟೇರಿ ಗ್ರಾಮಸ್ಥರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು
ಪಾಂಡವಪುರ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಬಳಿ ಹೋಗಿ ಅಹವಾಲು ಸ್ವೀಕರಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವ್ಯವಸ್ಥೆಯೇ ನಿಜವಾದ ಪ್ರಜಾಪ್ರಭುತ್ವ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಕಟ್ಟೇರಿ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಎಲ್ಲ 31 ಗ್ರಾಮ ಪಂಚಾಯಿತಿಗಳಲ್ಲೂ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದರು.
ಈಗಾಗಲೇ 7 ಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಈಗ ಕಟ್ಟೇರಿ ಗ್ರಾಮ ಪಂಚಾಯಿತಿಯಲ್ಲಿ 15 ದಿನಗಳ ಕಾಲ ಎಲ್ಲ ಇಲಾಖೆಯ ತಾಲೂಕು ಅಧಿಕಾರಿಗಳ ತಂಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ತಂಡ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪುಟ್ಟಣ್ಣಯ್ಯ ಫೌಂಡೇಷನ್ ಕಾರ್ಯಕರ್ತರು 6 ಗ್ರಾಮಗಳ ಮನೆ ಮನೆಗೆ ತೆರಳಿ ಜನರ ಸಮಸ್ಯೆ ಆಲಿಸಿ ಅರ್ಜಿ ಸ್ವೀಕರಿಸಿದ್ದರು. ಬಳಿಕ ಪೌತಿ ಖಾತೆ, ಇ-ಸ್ವತ್ತು. ಪಹಣಿ ಪತ್ರ, ವಾಸಸ್ಥಳ, ಜಾತಿ, ಆದಾಯ ಪ್ರಮಾಣ ಪತ್ರ, ವಂಶವೃಕ್ಷ ಪ್ರಮಾಣ ಪತ್ರಗಳನ್ನು ಸ್ಥಳದಲ್ಲೇ ವಿತರಿಸಲಾಗಿದೆ ಎಂದರು.
ಸರ್ಕಾರಿ ಜಾಗ, ಕೆರೆ ಒತ್ತುವರಿಗಳ ತೆರವು, ರಸ್ತೆ ಮತ್ತು ಕಾಲು ದಾರಿ ಒತ್ತುವರಿ ತೆರವುಗೊಳಿಸಲಾಗಿದೆ. ಸ್ಮಶಾನಗಳ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಮತ್ತಷ್ಟು ಅಹವಾಲು ಉಳಿದಿರುವುದರಿಂದ ಇನ್ನೂ ಐದು ದಿನಗಳ ಕಾಲ ಅಧಿಕಾರಿಗಳು ಪಂಚಾಯಿತಿಯಲ್ಲಿಯೇ ಉಳಿದು ಸಮಸ್ಯೆ ಬಗೆಹರಿಸಲಿದ್ದಾರೆ ಎಂದರು.
ಸಂಧ್ಯಾ ಸುರಕ್ಷಾ, ವಿಧವೆ, ವೃದ್ಧಾಪ್ಯ, ಅಂಗವಿಕಲ ಸೇರಿದಂತೆ ಇತರ ಸಾಮಾಜಿಕ ಭದ್ರತೆ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗಿದೆ. ಇಂತಹ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಜನರು ತಾಲೂಕು ಕೇಂದ್ರದ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಿತ್ತು. ಒಟ್ಟು 7,040 ಅಹವಾಲುಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 3 ಸಾವಿರ ಕಂದಾಯ ಹಾಗೂ 2 ಸಾವಿರ ತಾಲೂಕು ಪಂಚಾಯಿತಿಯ ಹಲವಾರು ಇಲಾಖೆಗಳಿಗೆ ಸಂಬಂಧಪಟ್ಟವಾಗಿವೆ. ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಅಲೆದಾಡದಿರುವುದೇ ನಿಜವಾದ ಸರ್ಕಾರಿ ಸೇವೆ ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಮೈಮರೆತರೆ ರೈತರು ಜಮೀನನ್ನು ಕಳೆದುಕೊಳ್ಳುವ ಸಂಭವವಿದೆ. ಹಾಗಾಗಿ ಜಮೀನಿನ ಎಲ್ಲ ದಾಖಲೆಗಳನ್ನು ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಭೂಮಿಯನ್ನು ಮಾರಾಟ ಮಾಡಬಾರದು. ಭೂಮಿ ಅಕ್ಷಯ ಪಾತ್ರೆ ಇದ್ದಂತೆ ಎಂದು ಕಿವಿಮಾತು ಹೇಳಿದರು.
ಉಪ ತಹಸೀಲ್ದಾರ್ ಲಕ್ಷ್ಮೀಕಾಂತ್ ಮಾತನಾಡಿ, ಜಾತಿ, ಆದಾಯ, ವಾಸಸ್ಥಳ ಸೇರಿದಂತೆ ಇತರ ಪ್ರಮಾಣ ಪತ್ರ
ಪಡೆಯಲು ಸರ್ಕಾರಕ್ಕೆ ಕಟ್ಟಬೇಕಾದ ಹಣವನ್ನೆಲ್ಲ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ವತಃ ಭರಿಸಿದ್ದಾರೆ ಎಂದರು.
ಶಾಸಕರಿಗೆ ಬೆಳ್ಳಿಗದೆ ನೀಡಿ ಸನ್ಮಾನ: ಕಾರ್ಯಕ್ರಮದಲ್ಲಿ ಕಟ್ಟೇರಿ ಗ್ರಾಮಸ್ಥರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಳ್ಳಿ ಗದೆ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು. ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಎಂ.ಎಸ್.ವೀಣಾ, ಕಟ್ಟೇರಿ ಪಂಚಾಯಿತಿ ಆಡಳಿತಾಧಿಕಾರಿ ಪ್ರಸನ್ನ, ಪಿಡಿಒ ಡಿ.ಪಿ.ಕುಮಾರ್, ಉಪ ತಹಸೀಲ್ದಾರ್ ಲಕ್ಷ್ಮೀಕಾಂತ್, ಟಿಎಚ್‌ಒ ಡಾ.ಸಿ.ಎ.ಅರವಿಂದ, ಸಿಡಿಪಿಒ ಕೆ.ಆರ್.ಪೂರ್ಣಿಮಾ, ಪಂಚಾಯತ್‌ರಾಜ್ ಇಂಜನಿಯರಿಂಗ್ ಇಲಾಖೆ ಎಇಇ ರಮ್ಯಾ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಪುಷ್ಪಲತಾ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಮಮತಾ, ಅಂಗವಿಕಲರ ಇಲಾಖೆಯ ಸ್ವಾತಿ, ರೈತ ಸಂಘದ ತಾಲೂಕು ಅಧ್ಯಕ್ಷ ವೈ.ಪಿ.ಮಂಜುನಾಥ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net