ಹಿರೀಸಾವೆ: ಅಪ್ರಾಪ್ತರಿಗೆ ಪಾಲಕರು ವಾಹನಗಳನ್ನು ಓಡಿಸಲು ನೀಡುವುದು ಅಕ್ಷಮ್ಯ ಅಪರಾಧ ಎಂದು ಹಿರೀಸಾವೆ ಪೊಲೀಸ್ ಠಾಣೆಯ ಪಿಎಸ್‌ಐ ರೂಪದೇವಿ ಬಿರಾದರ್ ಹೇಳಿದರು.
ಹಿರೀಸಾವೆ ಗ್ರಾಮದ ಪಿಎಂ ಶ್ರೀ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಚಾರ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ವಾಹನ ಯಾವುದೇ ಇರಲಿ ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕು. ಇದರಿಂದ ಅಪಘಾತಗಳು ನಡೆದ ಸಂದರ್ಭದಲ್ಲಿ ಕಾನೂನು ಹೋರಾಟ ಹಾಗೂ ನಷ್ಟದ ಪರಿಹಾರಕ್ಕೆ ಅನುಕೂಲವಾಗಲಿದೆ. ಜತೆಗೆ ಕಾನೂನು ತೊಡಕು ಎದುರಾಗುವುದಿಲ್ಲ ಎಂದು ತಿಳಿಸಿದರು.
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದು, ನಿಯಮ ಪಾಲಿಸದಿದ್ದರೆ ದಂಡ ಕಟ್ಟಬೇಕಾಗುತ್ತದೆ. ಅಪಘಾತ ಸಂಭವಿಸಿದರೆ ಜೀವ ಕಳೆದುಕೊಳ್ಳುವ ಸನ್ನಿವೇಶ ಎದುರಾಗಲಿದೆ. ಇದರಿಂದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಎಚ್ಚರಿಸಿದರು.
ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ತೆರಳುವಾಗ ರಸ್ತೆಯ ಎಡ ಬದಿಯಲ್ಲಿಯೇ ನಡೆದು ಸಾಗಬೇಕು. ರಸ್ತೆ ದಾಟುವ ವೇಳೆ ಎರಡೂ ಕಡೆ ಗಮನಿಸುವುದು ಸೂಕ್ತ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶೈಕ್ಷಣಿಕ ಹಂತದಲ್ಲಿ ವಿದ್ಯಾರ್ಥಿಗಳು ಓದಿನತ್ತ ಹೆಚ್ಚು ಗಮನಹರಿಸಬೇಕು. ಪಾಲಕರು ಸಹ ಮಕ್ಕಳ ದೈನಂದಿನ ಚಟುವಟಿಕೆ ಮೇಲೆ ಕಣ್ಣಾಡಿಸಬೇಕು. ಮಕ್ಕಳನ್ನು ಟಿವಿ ಹಾಗೂ ಮೊಬೈಲ್‌ನಿಂದ ದೂರ ಇರಿಸಬೇಕು. ವಾಹನಗಳನ್ನು ಚಾಲನೆ ಮಾಡಿಸುವ ಪ್ರಯತ್ನ ಮಾಡಬಾರದು. ಇವುಗಳಿಂದ ದೂರವಿದ್ದಷ್ಟು ಮಕ್ಕಳು ಸುರಕ್ಷತೆಯೊಂದಿಗೆ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.