ಚನ್ನರಾಯಪಟ್ಟಣ ತಾಲೂಕಿನಲ್ಲಿ ಸಿಲಿಂಡರ್ ಕೊರತೆಯಿಲ್ಲ

ಚನ್ನರಾಯಪಟ್ಟಣದ ಮಿನಿ ವಿಧಾನಸೌಧದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅವರು ಎಲ್‌ಪಿಜಿ ವಿತರಕರ ಸಭೆ ನಡೆಸಿದರು. ಜಿ.ಎಸ್.ಶಂಕರಪ್ಪ, ಎನ್.ಕುಮಾರ್, ಆರ್. ಯತೀಶ್ ಕುಮಾರ್ ಇದ್ದರು.
ಚನ್ನರಾಯಪಟ್ಟಣದ ಮಿನಿ ವಿಧಾನಸೌಧದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅವರು ಎಲ್‌ಪಿಜಿ ವಿತರಕರ ಸಭೆ ನಡೆಸಿದರು. ಜಿ.ಎಸ್.ಶಂಕರಪ್ಪ, ಎನ್.ಕುಮಾರ್, ಆರ್. ಯತೀಶ್ ಕುಮಾರ್ ಇದ್ದರು.
Published on
ಚನ್ನರಾಯಪಟ್ಟಣ: ತಾಲೂಕಿನಾದ್ಯಂತ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆ ಕಂಡುಬಂದರೆ ತಹಸೀಲ್ದಾರ್ ಕಚೇರಿಯ ಆಹಾರ ಶಾಖೆಯ ಆಹಾರ ಶಿರಸ್ತೇದಾರರನ್ನು ಸಂಪರ್ಕಿಸುವಂತೆ ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಸೋಮವಾರ ನಡೆದ ಎಲ್‌ಪಿಜಿ ಸಿಲಿಂಡರ್ ವಿತರಕರ ಸಭೆಯಲ್ಲಿ ಅವರು ಮಾತನಾಡಿ, ಮಧ್ಯಪ್ರಾಚ್ಯ ದೇಶಗಳ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲ ಪೂರೈಕೆ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದು, ಇದನ್ನು ನಿವಾರಿಸಬೇಕು. ಆ ನಿಟ್ಟಿನಲ್ಲಿ ಯಾರೂ ಆತಂಕಕ್ಕೊಳಗಾಗದಂತೆ ಗೃಹಬಳಕೆ ಅಡುಗೆ ಅನಿಲ ಪೂರೈಸಬೇಕು. ಗೃಹಬಳಕೆಯ ಸಿಲಿಂಡರ್ ಅನ್ನು ಒಮ್ಮೆ ಬುಕ್ ಮಾಡಿದ ನಂತರ ಮತ್ತೊಮ್ಮೆ ಬುಕ್ ಮಾಡಲು ನಗರ ಪ್ರದೇಶದವರಿಗೆ 25 ದಿನ ಮತ್ತು ಗ್ರಾಮೀಣ ಭಾಗದ ಗ್ರಾಹಕರಿಗೆ 45 ದಿನ ನಿಗದಿಪಡಿಸಲಾಗಿದೆ. ವದಂತಿಗಳಿಗೆ ಕಿವಿಗೊಡಬಾರದು. ತಾಲೂಕಿನಲ್ಲಿ ಸಿಲಿಂಡರ್‌ಗಳ ಕೊರತೆಯಿಲ್ಲ, ಸಿಲಿಂಡರ್ ಬುಕ್ ಮಾಡಿದ ನಂತರ ಕನಿಷ್ಠ ಅವಧಿವರೆಗೆ ಕಾಯಬೇಕು ಎಂದರು.
ಗ್ರಾಹಕರಿಗೆ ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ರೀತಿ ವ್ಯತ್ಯಯ ಉಂಟಾಗದಂತೆ ಗಮನಹರಿಸುವುದು ಅತ್ಯಗತ್ಯ. ಎಲ್‌ಪಿಜಿ ವಿತರಕರು ದಾಸ್ತಾನು ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು, ಇ-ಕೆವೈಸಿ ಆಗದಿರುವ ಗ್ರಾಹಕರಿಗೆ ತಕ್ಷಣವೇ ಮಾಡಿಸಿಕೊಂಡು, ಸಿಲಿಂಡರ್ ಸರಬರಾಜು ಮಾಡಬೇಕು. ಸಿಲಿಂಡರ್‌ಗಳ ಪೂರೈಕೆಯಲ್ಲಿ ಕೃತಕ ಅಭಾವ ಸೃಷ್ಟಿಸುವುದು ಹಾಗೂ ಗ್ರಾಹಕರಿಂದ ಅನಧಿಕೃತವಾಗಿ ಹೆಚ್ಚಿನ ಹಣ ವಸೂಲಿ ಮಾಡುವಂತಿಲ್ಲ, ಗೃಹ ಬಳಕೆ ಸಿಲಿಂಡರ್‌ಗಳನ್ನು ಅನಧಿಕೃತವಾಗಿ ವಾಣಿಜ್ಯ ಉದ್ದೇಶಕ್ಕೆ ವಿತರಿಸಬಾರದು. ವಿತರಣೆ, ದಾಸ್ತಾನುಗಳ ವಿವರಗಳನ್ನು ಪ್ರತಿದಿನ ತಾಲೂಕು ಆಡಳಿತಕ್ಕೆ ವರದಿ ಸಲ್ಲಿಸಬೇಕು. ಸಿಲಿಂಡರ್‌ಗಳ ವಿತರಣೆಯಲ್ಲಿ ವೈದ್ಯಕೀಯ, ಶಾಲಾ-ಕಾಲೇಜು, ಅಂಗನವಾಡಿ, ವಿದ್ಯಾರ್ಥಿನಿಲಯ, ಇಂದಿರಾ ಕ್ಯಾಂಟೀನ್‌ಗಳಿಗೆ ಆದ್ಯತೆ ನೀಡಬೇಕು ಎಂದರು.
ತಹಸಿಲ್ದಾರ್ ಜಿ.ಎಸ್.ಶಂಕರಪ್ಪ ಮಾತನಾಡಿ, ಸದ್ಯ ಸಿಲಿಂಡರ್ ಕೊರತೆಯಿಲ್ಲ. ಬುಕ್ಕಿಂಗ್ ಮಾಡಿದರೂ ಸಿಲಿಂಡರ್ ಸಿಗುತ್ತಿಲ್ಲ ಎಂಬ ಬಗ್ಗೆ ಆತಂಕಬೇಡ. ಕೇಂದ್ರ, ಗೃಹಬಳಕೆಯ ಸಿಲಿಂಡರ್‌ಗಳ ಪೂರೈಕೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಯಾರು ಸಹ ಏಜೆನ್ಸಿಗಳ ಮೇಲೆ ಮುಗಿಬೀಳುವ ಅಗತ್ಯವಿಲ್ಲ. ಸಮಸ್ಯೆಯಾದಲ್ಲಿ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಬಹುದಾಗಿದೆ ಎಂದರು.
ಪೊಲೀಸ್ ಉಪ ಅಧೀಕ್ಷಕ ಎನ್.ಕುಮಾರ್, ಪುರಸಭಾ ಮುಖ್ಯ ಅಧಿಕಾರಿ ಆರ್.ಯತೀಶ್ ಕುಮಾರ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಶಿರಸ್ತೇದಾರ ಹೇಮಂತ್ ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net