ಮುತ್ತಿಗೆ ಗ್ರಾಮದ ಕೃಷಿಕ ಆಜಂ ಪಾಷ ಅವರ ಜಮೀನಿನಲ್ಲಿ ಜೇನನ್ನು ಪೆಟ್ಟಿಗೆಗೆ ವರ್ಗಾಯಿಸುವ ಕ್ರಮ ಕುರಿತು ಡಿ.ರಾಜೇಶ್ ಪ್ರಾತ್ಯಕ್ಷಿಕೆ ನೀಡಿದರು. ರಂಜಿತ್, ಪ್ರಸನ್ನ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಿಲ್ಲಾ ಕೃಷಿ ತರಬೇತಿ ಕೇಂದ್ರ
ಎರಡು ದಿನಗಳ ಕಾರ್ಯಾಗಾರ
ಅರಕಲಗೂಡು: ಕೃಷಿಯಲ್ಲಿ ಜೇನುಹುಳಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಇವುಗಳ ಸಾಕಣೆ ಹಾಗೂ ಸಂರಕ್ಷಣೆಗೆ ರೈತರು ಹೆಚ್ಚಿನ ನಿಗಾ ವಹಿಸಬೇಕು ಎಂದು ಕಾರೆಕೆರೆ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಸಹನಾ ಸಲಹೆ ನೀಡಿದರು.
ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರದಲ್ಲಿ ಜೇನು ಸಾಕಣೆ ಕುರಿತು ಮಾಹಿತಿ ನೀಡಿದ ಅವರು, ಸಸ್ಯಗಳು ಫಲ ಬಿಡಬೇಕಾದರೆ ಪರಾಗಸ್ಪರ್ಶ ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿದೆ. ಹೂವಿನ ಮಕರಂದಕ್ಕಾಗಿ ಬರುವ ಜೇನುಹುಳುಗಳು ಪರಾಗ ಸ್ಪರ್ಶ ಕ್ರಿಯೆ ನಡೆಸಿ ಉತ್ಪಾದನೆಗೆ ಮಹತ್ವದ ಕೊಡುಗೆ ನೀಡುತ್ತಿವೆ. ಜೇನು ಹುಳುಗಳ ಸಂತತಿ ನಾಶವಾದರೆ ಆಹಾರದ ಉತ್ಪಾದನೆ ಮೇಲೆ ತೀವ್ರ ಪರಿಣಾಮ ಉಂಟಾಗುವ ಅಪಾಯವಿದೆ. ಹಾಗಾಗಿ ಜೇನುಹುಳುಗಳ ಸಂತತಿಯ ಸಂರಕ್ಷಣೆ ಅಗತ್ಯ ಎಂದರು.
ಜೇನು ಸಾಕಣೆಯ ಇತಿಹಾಸ, ಪ್ರಬೇಧಗಳು, ಜೀವನ ಚಕ್ರ, ನಿರ್ವಹಣಾ ಕ್ರಮ, ಜೇನು ಸಾಕಣೆಗೆ ಬಳಸುವ ಉಪಕರಣಗಳು, ಸಂರಕ್ಷಣಾ ಕ್ರಮಗಳು, ಆಹಾರ ಅಭಾವದ ಸಂದರ್ಭದಲ್ಲಿ ಜೇನು ನೊಣಗಳ ನಿರ್ವಹಣೆ, ರಾಣಿ ಜೇನುನೊಣಗಳ ಸಾಮೂಹಿಕ ಉತ್ಪಾದನೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಜೇನು ಪೆಟ್ಟಿಗೆಯ ವಿನ್ಯಾಸ, ಜೇನು ನೊಣಗಳನ್ನು ಪ್ರಾಯೋಗಿಕವಾಗಿ ನಿರ್ವಹಣೆ ಮಾಡಲು ಅನುಸರಿಸಬೇಕಾದ ಕ್ರಮಗಳು, ಯಂತ್ರ ಬಳಸಿ ಜೇನು ತುಪ್ಪ ಕೊಯ್ಲು ಮಾಡುವ ವಿಧಾನಗಳ ಕುರಿತು ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದ ಪ್ರಗತಿಪರ ಯುವ ರೈತ ಬಿ.ಎಸ್.ರಂಜಿತ್ ಪ್ರಾತ್ಯಕ್ಷಿಕೆ ನೀಡಿದರು.
ಮುತ್ತಿಗೆ ಗ್ರಾಮದ ಜೇನು ಸಾಕಣೆ ಕೃಷಿಕ ಆಜಂ ಪಾಷ ಅವರ ಜಮೀನಿಗೆ ಭೇಟಿ ನೀಡಲಾಯಿತು. ನೈಸರ್ಗಿಕವಾಗಿ ಗೂಡು ಕಟ್ಟಿದ್ದ ಜೇನನ್ನು ಪೆಟ್ಟಿಗೆಗೆ ವರ್ಗಾಯಿಸುವ ಕ್ರಮವನ್ನು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ.ರಾಜೇಶ್ ಪ್ರಾತ್ಯಕ್ಷಿಕೆ ನೀಡಿ ತೋರಿಸಿದರು. ಕಾರ್ಯಾಗಾರದಲ್ಲಿ ತರಬೇತಿ ಪಡೆದ ರೈತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಎ.ಆರ್. ಪ್ರಸನ್ನ, ಕೃಷಿ ಅಧಿಕಾರಿ ಫರ್ಹೀನ ಅಂಜುಂ ಇದ್ದರು.