ಬಸ್ ಚಾಲಕ, ನಿರ್ವಾಹಕರ ಕನ್ನಡ ಪ್ರೇಮ ಅನನ್ಯ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನ್ನು ಕನ್ನಡದ ರಥದ ಮಾದರಿಯಲ್ಲಿ ಅಲಂಕರಿಸುವ ಮೂಲಕ ಭಾಷಾಭಿಮಾನದ ಕಂಪು ಮೂಡಿಸುತ್ತಿರುವ ‘ಮೈಸೂರು-ಹೊಸಪೇಟೆ’ ಬಸ್‌ನ ಚಾಲಕ ಮಂಜುನಾಥ್ ಹಬ್ಬಿಗೇರಿ ಮತ್ತು ನಿರ್ವಾಹಕರ ಪ್ರಕಾಶ್ ಮಲ್ಲಾರಿ ಅವರನ್ನು ಮಾರುತಿ ಮಹಾಬುಜ ಸೇವಾ ಟ್ರಸ್ಟ್ ಕಾರ್ಯದರ್ಶಿ ರಾಜೇಶ್ ಕೆಂಚನಹಳ್ಳಿ ಸನ್ಮಾನಿಸಿಸಿದರು. ರಾಜಕುಮಾರ್, ಸಿ.ಸಿ.ನೂತನ್, ಶೋಭಾ ರೋಹಿತ್ ಇತರರು ಇದ್ದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನ್ನು ಕನ್ನಡದ ರಥದ ಮಾದರಿಯಲ್ಲಿ ಅಲಂಕರಿಸುವ ಮೂಲಕ ಭಾಷಾಭಿಮಾನದ ಕಂಪು ಮೂಡಿಸುತ್ತಿರುವ ‘ಮೈಸೂರು-ಹೊಸಪೇಟೆ’ ಬಸ್‌ನ ಚಾಲಕ ಮಂಜುನಾಥ್ ಹಬ್ಬಿಗೇರಿ ಮತ್ತು ನಿರ್ವಾಹಕರ ಪ್ರಕಾಶ್ ಮಲ್ಲಾರಿ ಅವರನ್ನು ಮಾರುತಿ ಮಹಾಬುಜ ಸೇವಾ ಟ್ರಸ್ಟ್ ಕಾರ್ಯದರ್ಶಿ ರಾಜೇಶ್ ಕೆಂಚನಹಳ್ಳಿ ಸನ್ಮಾನಿಸಿಸಿದರು. ರಾಜಕುಮಾರ್, ಸಿ.ಸಿ.ನೂತನ್, ಶೋಭಾ ರೋಹಿತ್ ಇತರರು ಇದ್ದರು.
Published on
ಚನ್ನರಾಯಪಟ್ಟಣ: ಕನ್ನಡದ ನೆಲಜಲ, ಭಾಷೆ, ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನ್ನು ಕನ್ನಡದ ರಥದ ಮಾದರಿಯಲ್ಲಿ ಅಲಂಕರಿಸುವ ಮೂಲಕ ಭಾಷಾಭಿಮಾನ ಮೂಡಿಸುತ್ತಿರುವ ‘ಮೈಸೂರು-ಹೊಸಪೇಟೆ’ ಬಸ್ ಚಾಲಕ ಮತ್ತು ನಿರ್ವಾಹಕರ ಕಾರ್ಯ ವೈಖರಿ ನಿಜಕ್ಕೂ ಶ್ಲಾಘನೀಯ ಎಂದು ಮಹಾಬುಜ ಮಾರುತಿ ಇಂಡಿಯನ್ ಸೇವಾ ಟ್ರಸ್ಟ್ ಹಾಗೂ ಕೇಸರಿ ನಂದನ ಕಲಾ ಸಂಘದ ಕಾರ್ಯದರ್ಶಿ ರಾಜೇಶ್ ಕೆಂಚನಹಳ್ಳಿ ತಿಳಿಸಿದರು.
ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚನ್ನರಾಯಪಟ್ಟಣ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಮಂಡ್ಯ ವಿಭಾಗದ ಪಾಂಡವಪುರ ಘಟಕದ ಬಸ್ ಚಾಲಕ ಮಂಜುನಾಥ್ ಅಬ್ಬಿಗೇರಿ ಮತ್ತು ನಿರ್ವಾಹಕ ಪ್ರಕಾಶ್ ಮಲ್ಲಾರಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಭಾಷಾಭಿಮಾನವನ್ನು ತೋರ್ಪಡಿಕೆಗೆ ಅಳವಡಿಸಿಕೊಳ್ಳದೆ, ಕಾಯಕದ ಜತೆಗೂ ಅಳವಡಿಸಿಕೊಂಡಿರುವ ಬಸ್ ಚಾಲಕ ಮತ್ತು ನಿರ್ವಾಹಕರು ತಮ್ಮ ಸ್ವಂತ ಹಣದಲ್ಲಿ ಬಸ್ಸನ್ನು ತೇರಿನಂತೆ ಸಿಂಗರಿಸಿದ್ದಾರೆ. ಇವರು ನಿಜಕ್ಕೂ ಕನ್ನಡದ ಕಟ್ಟಾಳುಗಳು. ಮಂಜುನಾಥ್ ಹಬ್ಬಿಗೇರಿ ಮತ್ತು ಪ್ರಕಾಶ್ ಮಲ್ಲಾರಿ ಬಸ್‌ನ ಮುಂಭಾಗದಲ್ಲಿ ಭುವನೇಶ್ವರಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಒಳಭಾಗದಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆ, ಅವುಗಳ ವಿಶೇಷತೆ, ಪ್ರಯಾಣಿಕರ ಸಲುವಾಗಿ ಓದಲು ಕನ್ನಡ ದಿನಪತ್ರಿಕೆಗಳು, ಪುಸ್ತಕಗಳು, ಜ್ಞಾನಪೀಠ ಪ್ರಶಸ್ತಿ ವಿಜೇತರ ವಿವರಗಳು, ಮನರಂಜನೆಗಾಗಿ ಕನ್ನಡ ಚಿತ್ರಗೀತೆಗಳು, ಬಸ್ ಒಳಭಾಗದಲ್ಲಿ ಕೂಡ ಹಳದಿ ಮತ್ತು ಕೆಂಪು ಬಣ್ಣದ ಹೂಗಳಿಂದ ಅಲಂಕರಿಸಿ, ರಾಜ್ಯವನ್ನು ಆಳಿದ ರಾಜ ಮಹಾರಾಜರ ಪರಿಚಯ, ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯಕ್ಕೆ ಹೆಸರು ತಂದಿರುವ ಕ್ರೀಡಾಪಟುಗಳ ಮಾಹಿತಿ ಹಂಚುವ ಮೂಲಕ ಕನ್ನಡದ ಹಿರಿಮೆಯನ್ನು ಸಾರುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಭೂಮಿ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಜಿ.ಎಸ್.ರಾಜಕುಮಾರ್ ಮಾತನಾಡಿ, ಕನ್ನಡ ನಮ್ಮ ಭಾಷೆ. ಮಾತೃಭಾಷೆಯ ಹಿರಿಮೆಯನ್ನು ಸಾರಲು ಯಾವುದೇ ಹಿಂಜರಿಕೆ ಬೇಡ, ಭಾಷಾಭಿಮಾನ ಎನ್ನುವುದನ್ನು ನವೆಂಬರ್ ತಿಂಗಳ ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಮಾತ್ರ ಸೀಮಿತಗೊಳಿಸದೆ ಜೀವನವಿಡೀ ಕಂಪು ಪಸರಿಸಲು ಮುಂದಾಗಬೇಕು. ಪರಭಾಷೆಗಳ ವ್ಯಾಮೋಹಕ್ಕೆ ಬಲಿಯಾಗಿ ಮಾತೃಭಾಷೆಯ ಬಗ್ಗೆ ಕೀಳರಿಮೆ ತೋರುವವರಿಗೆ ಮಂಜುನಾಥ್ ಹಬ್ಬಿಗೇರಿ ಮತ್ತು ಪ್ರಕಾಶ್ ಮಲ್ಲಾರಿ ಆದರ್ಶವಾಗಿದ್ದಾರೆ. ಸಾರಿಗೆ ಸಂಸ್ಥೆಯ ಬಸ್ ಸಂಪೂರ್ಣ ಕನ್ನಡ ರಥವಾಗಿ ಬದಲಾಗಿದ್ದು, ಕನ್ನಡ ಗೀತೆಗಳ ಮಾಧುರ್ಯವೂ ಇದೆ ಎಂದರು.
ಚನ್ನರಾಯಪಟ್ಟಣದ ಸಂಚಾರಿ ನಿಯಂತ್ರಕರಾದ ಶೋಭಾ, ರೋಹಿತ್, ಪ್ರಕಾಶ್ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಸೇರಿದಂತೆ ಸಾರಿಗೆ ಸಿಬ್ಬಂದಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net