ಹೋರಾಟಗಾರರ ತ್ಯಾಗ ಇತಿಹಾಸರದಲ್ಲಿ ಚಿರಸ್ಥಾಯಿ

ಹಾಸನದಲ್ಲಿ ಸಂವಿಧಾನದ ಹತ್ಯೆ ದಿನ ಕಾರ್ಯಕ್ರಮ
ಹಾಸನದಲ್ಲಿ ಸಂವಿಧಾನದ ಹತ್ಯೆ ದಿನ ಕಾರ್ಯಕ್ರಮ
Published on

ಪ್ರಮುಖ ಮುಖ್ಯಾಂಶಗಳು

  • ಹೋರಾಟಗಾರರ ತ್ಯಾಗ ಇತಿಹಾಸರದಲ್ಲಿ ಚಿರಸ್ಥಾಯಿ
  • ಶಾಸಕ ಸಿಮೆಂಟ್ ಮಂಜು ಬಣ್ಣನೆ
  • ಹಾಸನದಲ್ಲಿ ಸಂವಿಧಾನದ ಹತ್ಯೆ ದಿನ ಕಾರ್ಯಕ್ರಮ

ಹಾಸನ:

ದೇಶದಲ್ಲಿ ಜಾರಿಗೊಳಿಸಲಾದ 1975ರ ತುರ್ತು ಪರಿಸ್ಥಿತಿ ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಕರಾಳ ಅಧ್ಯಾಯವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳವಾರ ಆಯೋಜಿಸಿದ್ದ 1975ರ ತುರ್ತು ಪರಿಸ್ಥಿತಿ 51ನೇ ವರ್ಷದ ಕರಾಳ ದಿನಗಳು ಹಾಗೂ ಸಂವಿಧಾನ ಹತ್ಯಾ ದಿವಸ್ ಕಾರ್ಯಕ್ರಮದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ್ದ ಹೋರಾಟಗಾರರನ್ನು ಸನ್ಮಾನಿಸಿ ಮಾತನಾಡಿದರು.

ಸಂವಿಧಾನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸಿ ಅಭಿವ್ಯಕ್ತಿ ಸ್ವಾತಂತ್ರೃ ಹತ್ತಿಕ್ಕುವ ಪ್ರಯತ್ನ ನಡೆದಿತ್ತು. ಆ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳ ಉಳಿವಿಗಾಗಿ ಸೆರೆವಾಸ ಅನುಭವಿಸಿದ ಹೋರಾಟಗಾರರ ತ್ಯಾಗ ದೇಶದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ ಎಂದರು.
ತುರ್ತು ಪರಿಸ್ಥಿತಿಯ ಅವಧಿಯಲ್ಲಿ ದೇಶಾದ್ಯಂತ ಸಾವಿರಾರು ರಾಜಕೀಯ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಹಾಸನ ಜಿಲ್ಲೆಯ ಹಲವರು ಜೈಲು ಶಿಕ್ಷೆ ಅನುಭವಿಸಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ಹೋರಾಡಿದ ಅವರ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಅಂದು ಸರ್ಕಾರದ ವಿರುದ್ಧ ಧ್ವನಿ ಎತ್ತಿದವರನ್ನು ಬಂಧಿಸುವುದು, ಪತ್ರಿಕೆಗಳ ಮೇಲೆ ಒತ್ತಡ ಹೇರಿಕೆ, ಸಾರ್ವಜನಿಕ ಸಭೆ-ಸಮಾರಂಭಗಳಿಗೆ ನಿರ್ಬಂಧ, ಅಭಿವ್ಯಕ್ತಿ ಸ್ವಾತಂತ್ರೃದ ಮೇಲಿನ ನಿಯಂತ್ರಣ ಸೇರಿದಂತೆ ಹಲವು ಕ್ರಮಗಳು ಜಾರಿಯಾಗಿದ್ದವು. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಯೊಬ್ಬರೂ ಕಾಪಾಡಬೇಕು ಎಂದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲೇ ಹೇಳಿದ್ದ ‘ಅಂಧೇರಾ ಚಟೇಗಾ, ಸೂರಜ್ ನಿಕಲೇಗಾ, ಕಮಲ್ ಖಿಲೇಗಾ’ ಎಂಬ ಮಾತು ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ನಿಜವಾಗಿದೆ. ಭಾರತೀಯ ಜನತಾ ಪಕ್ಷ ಈಗ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದ್ದು, ಇದರ ಹಿಂದೆ ಸಂಘ ಪರಿವಾರ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡಿದ ಸಾವಿರಾರು ಕಾರ್ಯಕರ್ತರ ತ್ಯಾಗ ಮತ್ತು ಸಮರ್ಪಣೆಯಿದೆ ಎಂದರು.

ತುರ್ತು ಪರಿಸ್ಥಿತಿಯ ವೇಳೆ ಸೆರೆವಾಸ ಅನುಭವಿಸಿದ್ದ ಬಿ.ಎಸ್.ಪರಮಶಿವಯ್ಯ ಮಾತನಾಡಿ, ಹೊಳೆನರಸೀಪುರದಲ್ಲಿ ಸಂಘದ ಶಿಬಿರ ನಡೆದ ಸಂದರ್ಭದಲ್ಲಿ ಸತ್ಯನಾರಾಯಣ ಗುಪ್ತ ಸೇರಿದಂತೆ ಅನೇಕ ಕಾರ್ಯಕರ್ತರೊಂದಿಗೆ ಸರ್ಕಾರದ ದಮನ ನೀತಿಯ ವಿರುದ್ಧ ಹೋರಾಟ ಸಂಘಟಿಸಲಾಗಿತ್ತು. ಪೊಲೀಸರು ಬಂಧಿಸಲು ಹುಡುಕುತ್ತಿದ್ದ ಪರಿಸ್ಥಿತಿಯಲ್ಲೂ ರಹಸ್ಯ ಸಭೆ ನಡೆಸಿ, ಕರಪತ್ರಗಳು ಹಾಗೂ ಪತ್ರಿಕೆಗಳನ್ನು ಹಂಚುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದೆವು. ಹಲವು ಬಾರಿ ಪೊಲೀಸರ ಕಣ್ತಪ್ಪಿಸಿ ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ಎದುರಾಗಿತ್ತು ಎಂದು ಸ್ಮರಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಶ್ಯಾಮಾಪ್ರಸಾದ್ ಮುಖರ್ಜಿ 125ನೇ ಜನ್ಮ ವರ್ಷದ ಸಂದರ್ಭದಲ್ಲಿ ಅವರ ಏಕಾತ್ಮ ಮಾನವತಾವಾದದ ತತ್ವಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದರು.
ಬಿಜೆಪಿ ವಿಭಾಗ ಪ್ರಭಾರಿ ಸ್ವಾಮಿ ಮರುಳಾಪುರ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಡೆದ ಹೋರಾಟಗಳು ಹಾಗೂ ನಂತರದ ರಾಜಕೀಯ ಬೆಳವಣಿಗೆಗಳನ್ನು ವಿವರಿಸಿದರು.
ಹಿರಿಯ ಹೋರಾಟಗಾರರು ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಸಾಧನೆಗೈದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ರಾಜಕುಮಾರ್, ನೇತ್ರಾವತಿ ಮಂಜುನಾಥ್, ಗಿರಿಶ್ ನಂಬಿಹಳ್ಳಿ, ರೇಣುಕಾನಂದ, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಹಿರಿಯ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net