‘ಗ್ರಾಮೀಣ ಕಲರವ’ದಲ್ಲಿ ವಿದ್ಯಾರ್ಥಿನಿಯರದ್ದೇ ಪಾರುಪತ್ಯ!

ಹಾಸನ ನಗರದ ಎಂ.ಜಿ.ರಸ್ತೆಯಲ್ಲಿನ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೀರು ಹೊರುವ ಸ್ಪರ್ಧೆಯಲ್ಲಿ ಪಾಲ್ಗೊಂಡರು.
ಹಾಸನ ನಗರದ ಎಂ.ಜಿ.ರಸ್ತೆಯಲ್ಲಿನ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೀರು ಹೊರುವ ಸ್ಪರ್ಧೆಯಲ್ಲಿ ಪಾಲ್ಗೊಂಡರು.
Published on

ಪ್ರಮುಖ ಮುಖ್ಯಾಂಶಗಳು

  • ‘ಗ್ರಾಮೀಣ ಕಲರವ’ದಲ್ಲಿ ವಿದ್ಯಾರ್ಥಿನಿಯರದ್ದೇ ಪಾರುಪತ್ಯ!
  • ಕೊಡದಲ್ಲಿ ನೀರು ಹೊತ್ತು ಓಡಿದರು, ಹಗ್ಗ ಜಗ್ಗಿದರು, ಮಡಕೆ ಒಡೆದರು
  • ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ದಿನಾಚರಣೆ
ಹಾಸನ: ಉರಿ ಬಿಸಿಲ ಬೇಗೆಯನ್ನೂ ಲೆಕ್ಕಿಸದ ವಿದ್ಯಾರ್ಥಿನಿಯರು ತಲೆ ಮತ್ತು ಸೊಂಟದ ಮೇಲೆ ನೀರು ತುಂಬಿದ ಕೊಡ ಹೊತ್ತು ಓಡಿದರೆ, ಮಡಕೆ ಒಡೆಯುವ ಆಟ, ಮತ್ತೊಂದೆಡೆ ಹಗ್ಗ-ಜಗ್ಗಾಟಕ್ಕೆ ನಿಂತು ಬಲಾಬಲ ಶಕ್ತಿ ಪ್ರದರ್ಶಿಸುವ ಮೂಲಕ ನಾವು ಎಲ್ಲದಕ್ಕೂ ಸೈ ಎಂದು ಸಾಬೀತುಪಡಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು.
ಇದು ನಗರದ ಎಂ.ಜಿ.ರಸ್ತೆಯಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಣತಿ ಮಹಿಳಾ ವೇದಿಕೆ, ಹೇಮಾವತಿ ರೇಂಜರ್ಸ್ ಘಟಕ ಮತ್ತು ಐಕ್ಯೂಎಸಿ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ಬುಧವಾರ ಕಾಲೇಜಿನ ವಿದ್ಯಾರ್ಥಿನಿಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಗ್ರಾಮೀಣ ಕಲರವದಲ್ಲಿ ರಸದೌತಣ ಉಣಬಡಿಸಿದ ಕ್ಷಣಗಳು.
ವರ್ಷಪೂರ್ತಿ ಪಾಠದಲ್ಲಿ ಮಗ್ನರಾಗಿದ್ದ ವಿದ್ಯಾರ್ಥಿನಿಯರಿಗೆ ಗ್ರಾಮೀಣ ಕ್ರೀಡೆಯಾದ ನೀರು ಹೊರುವ ಆಟ, ಮಡಕೆ ಒಡೆಯುವ ಆಟ, ಗೋಣಿಚೀಲದ ಓಟ, ಮೂರು ಕಾಲು ಓಟ, ಹಗ್ಗ-ಜಗ್ಗಾಟ, ರಂಗೋಲಿ ಸ್ಪರ್ಧೆ, ಹಾಡುಗಾರಿಕೆ ಸ್ಪರ್ಧೆ ನಡೆಸಲಾಯಿತು.
ವಿದ್ಯಾರ್ಥಿನಿಯರು ತಲೆ ಮತ್ತು ಸೊಂಟದ ಮೇಲೆ ನೀರು ತುಂಬಿದ ಕೊಡ ಹೊತ್ತು ಸರಾಗವಾಗಿ ಓಡುತ್ತಿದ್ದರೆ, ಇತ್ತ ಸ್ನೇಹಿತೆಯರ ಶಿಳ್ಳೆ ಮತ್ತು ಚಪ್ಪಾಳೆ ಹೊಡುವ ಮೂಲಕ ಪ್ರೋತ್ಸಾಹಿಸಿದರು. ಮೂರು ಕಾಲಿನ ಓಟ ನೋಡುಗರ ಮೈ ಜುಮ್ಮೆನ್ನುವಂತಿತ್ತು. ಗೋಣಿಚೀಲದ ಓಟದಲ್ಲಿ ವಿದ್ಯಾರ್ಥಿನಿಯರು ಕಪ್ಪೆಗಳಂತೆ ಕುಪ್ಪಳಿಸಿ ಸಂತಸಪಟ್ಟರು.
ಹಗ್ಗ-ಜಗ್ಗಾಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರ ತಂಡಗಳು ತಮ್ಮ ಬಲಾಬಲ ಪ್ರದರ್ಶಿಸಿದವು. ಬಾಲ್ಯದ ಆಟವನ್ನು ಆಡಲು ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತಿದ್ದು ಎಲ್ಲರ ಗಮನ ಸೆಳೆಯಿತು.
ಕ್ಯಾಂಟೀನ್ ಡೇ: ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕ್ಯಾಂಟೀನ್ ಡೇನಲ್ಲಿ ವಿದ್ಯಾರ್ಥಿಗಳು ಬಿರಿಯಾನಿ, ಮಸಾಲೆ ಮಜ್ಜಿಗೆ, ಮೊಳಕೆ ಕಾಳುಗಳು, ಚುರುಮುರಿ, ಪಾನಿಪುರಿ, ಬಗೆಬಗೆಯ ಹಣ್ಣುಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿ ತಿಂಡಿ ಪ್ರಿಯರನ್ನು ತಮ್ಮತ್ತ ಸೆಳೆದರು.
ಆತ್ಮಶಕ್ತಿಯಿಂದ ಸಮಸ್ಯೆ ಪರಿಹಾರ ಸುಲಭ
ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿ, ಮಹಾನಗರ ಪಾಲಿಕೆ ಅಭಿಯಂತರರಾದ ಕೆ.ಆರ್.ಕವಿತಾ ಉದ್ಘಾಟಿಸಿ ಮಾತನಾಡಿ, ಆತ್ಮಶಕ್ತಿಯನ್ನು ಬಲಪಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉದ್ಭವವಾಗುವ ಕಠಿಣ ಸಮಸ್ಯೆಯನ್ನು ಸುಲಭವಾಗಿ ಎದುರಿಸಬಹುದಾಗಿದೆ ಎಂದು ಹೇಳಿದರು.
ಸ್ವಾರ್ಥ ರಹಿತ ಹಾಗೂ ಸಮಾಜಮುಖಿಯಾಗಿ ಕೆಲಸ ಮಾಡಬೇಕು, ಬೇರೆಯವರ ಬಗ್ಗೆ ಅವಲೋಕಿಸುವ ಮೊದಲು ನಾವು ಸರಿಯಾಗಿ ಇದ್ದೇವಾ ಎಂಬುದನ್ನು ಅರಿತರೆ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಾಗಲಿದೆ ಎಂದರು.
ಶ್ರೀಮಂತಿಕೆ, ಆಡಂಬರಗಳಿಗೆ ಮಾರುಹೋಗದೆ ಸರಳ ಜೀವನಶೈಲಿಯನ್ನು ರೂಪಿಸಿಕೊಂಡು ಸಮಾಜಮುಖಿಯಾಗಬೇಕು. ಉತ್ತಮ ವ್ಯಕ್ತಿತ್ವ ಹೊಂದಿರುವಂತಹ ವ್ಯಕ್ತಿಗಳನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಕೆ.ಜಿ.ಕವಿತಾ ಮಾತನಾಡಿ, ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೆಚ್ಚಾಗುವ ಮೂಲಕ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು
ಹೆಣ್ಣು ಮಕ್ಕಳು ಆತ್ಮಶಕ್ತಿಯನ್ನು ವೃದ್ಧಿಕೊಳ್ಳುವ ಮೂಲಕ ಎದುರಾಗುವಂತಹ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ಹೇಳಿದರು.
ಇತ್ತೀಚೆಗೆ ಯುವಪೀಳಿಗೆಯಲ್ಲಿ ಮೊಬೈಲ್ ವ್ಯಾಮೋಹ ಹೆಚ್ಚಾಗಿ ಗ್ರಾಮೀಣ ಕ್ರೀಡೆಗಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ, ಹೀಗಾಗಿ ಅವರಲ್ಲಿ ಆಸಕ್ತಿ ಹೆಚ್ಚಿಸುವ ಸಲುವಾಗಿ ಗ್ರಾಮೀಣ ಕ್ರೀಡೆೆ ಹಾಗೂ ಕ್ಯಾಂಟಿನ್ ಡೇ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾಲೇಜಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಪ್ರತಿ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಗ್ರಾಮೀಣ ಕಲರವಕ್ಕೆ ಮೆರುಗು ತರಬೇಕು ಎಂದರು.
ಗ್ರಾಮೀಣ ಕಲರವದಲ್ಲಿ ಪ್ರಣತಿ ಮಹಿಳಾ ವೇದಿಕೆ ಸಂಚಾಲಕಿ ಡಾ.ಎಂ.ಜೆ.ಶ್ರೀದೇವಿ, ಹೇಮಾವತಿ ರೇಂಜರ್ಸ್ ಘಟಕ ಸಂಚಾಲಕಿ ಜಿ.ಎಂ.ಲತಾ., ಸಾಂಸ್ಕೃತಿಕ ವೇದಿಕೆ ಸಂಚಾಲಕ ವಿ.ಪುರುಷೋತ್ತಮ್ ಹಾಗೂ ಕಾಲೇಜಿನ ಎಲ್ಲ ವಿಭಾಗದ ಪ್ರಾಧ್ಯಾಪಕರು, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net