ಹಾಸನ: ಕವಿಯ ಭಾವನೆಗಳು ಭಾಷೆಯ ಮಿತಿ ಮೀರಿ ವ್ಯಕ್ತವಾಗುತ್ತವೆ. ಅವುಗಳಿಗೆ ಯಾವುದೇ ಸಂಕೋಲೆಗಳಿಲ್ಲ ಎಂದು ಹಿರಿಯ ಸಾಹಿತಿ ಎನ್.ಎಲ್.ಚೆನ್ನೇಗೌಡ ಅಭಿಪ್ರಾಯಪಟ್ಟರು.
ನಗರದ ಕವಯತ್ರಿ ಡಾ.ಕುಸುಮಾ ಅವರ ನಿವಾಸದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 340ನೇ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಲೇಖಕಿ ಸುಭದ್ರಾಬಾಯಿ ಅವರ ಮನದ ಭಾವಗಳು ಕವನ ಸಂಕಲನದ ವಿಮರ್ಶೆ ನಡೆಸಿ ಮಾತನಾಡಿದರು.
ಈ ಸಂಕಲನದಲ್ಲಿ ಒಟ್ಟು 51 ಕವನಗಳಿದ್ದು, ಸರಳ ಶೈಲಿಯಲ್ಲಿ ಆಳವಾದ ಚಿಂತನೆಗಳನ್ನು ವ್ಯಕ್ತಪಡಿಸುತ್ತವೆ. ಕವನಗಳ ಅಂತ್ಯದಲ್ಲಿ ಜೀವನ ಮೌಲ್ಯಗಳನ್ನು ಸಾರುವ ಅಂಶಗಳು ಗಮನಸೆಳೆಯುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಜನಪದ ಗೀತೆ ಗಾಯನದ ಮೂಲಕ ಮನೆ ಮನೆ ಕವಿಗೋಷ್ಠಿ ಸಂಚಾಲಕಿ ಸುಕನ್ಯಾ ಮುಕುಂದ ಉದ್ಘಾಟಿಸಿ ಮಾತನಾಡಿ, ಮನದ ಭಾವಗಳು ಕವನ ಸಂಕಲನವು ಕವಿಯ ಒಳಭಾವನೆಗಳನ್ನು ನೈಸರ್ಗಿಕವಾಗಿ ವ್ಯಕ್ತಪಡಿಸುವ ಕೃತಿ. ಪಂಜಾಬಿ ಭಾಷಾ ಹಿನ್ನೆಲೆಯಿಂದ ಬಂದ ಲೇಖಕಿ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಿರುವುದು ಶ್ಲಾಘನೀಯ ಎಂದರು.
ಕವಿಗೋಷ್ಠಿಯಲ್ಲಿ ಸುಂದರೇಶ್ ಡಿ.ಉಡುವಾರೆ, ದಿಬ್ಬೂರು ರಮೇಶ್, ವಿದ್ಯಾಶ್ರೀ, ಜಯಂತಿ ಚಂದ್ರಶೇಖರ್, ಬಿ.ಎನ್. ಗಿರಿಜಾಂಬ, ಪ್ರೇಮಾ ಪ್ರಶಾಂತ್, ಎಸ್.ಲಲಿತಾ, ಸುಶೀಲಾ ಸೋಮಶೇಖರ್, ಗೊರೂರು ಅನಂತರಾಜು, ಯಮುನಾವತಿ, ಎಚ್.ಕೆ. ಎಮ್ಮೆಗೌಡ ಸೇರಿದಂತೆ ಅನೇಕ ಕವಿಗಳು ಕವನ ವಾಚಿಸಿದರು.