‘ಕೈ’ಮತದಾರರನ್ನು ಪಟ್ಟಿಯಿಂದ ತೆಗೆಯುವ ಹುನ್ನಾರ

ಆಲೂರಿನ ಶಾಂಭವಿ ಯೋಗೇಶ್ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ  ಕುರಿತು ಪಕ್ಷದ ಕಾರ್ಯಕರ್ಯ ಸಭೆಯನ್ನು ಸಂಸದ ಶ್ರೇಯಸ್ ಪಟೇಲ್ ಉದ್ಘಾಟಿಸಿದರು. ಊ.ಒ.ರೇವಣ್ಣ, ಪಟೇಲ್ ಶಿವಪ್ಪ,ಲಕ್ಷ್ಮಣ್, ಶಶಿಧರ್ ಇತರರು ಇದ್ದರು.
ಆಲೂರಿನ ಶಾಂಭವಿ ಯೋಗೇಶ್ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕುರಿತು ಪಕ್ಷದ ಕಾರ್ಯಕರ್ಯ ಸಭೆಯನ್ನು ಸಂಸದ ಶ್ರೇಯಸ್ ಪಟೇಲ್ ಉದ್ಘಾಟಿಸಿದರು. ಊ.ಒ.ರೇವಣ್ಣ, ಪಟೇಲ್ ಶಿವಪ್ಪ,ಲಕ್ಷ್ಮಣ್, ಶಶಿಧರ್ ಇತರರು ಇದ್ದರು.
Published on
ಆಲೂರು: ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ನೆಪದಲ್ಲಿ ಕಾಂಗ್ರೆಸ್ ಮತದಾರರನ್ನು ಪಟ್ಟಿಯಿಂದ ತೆಗೆಯುವ ಹುನ್ನಾರ ನಡೆದಿದೆ. ಕಾಂಗ್ರೆಸ್ ಗುರಿಯಾಗಿಸಿ ನಡೆಸುವ ಪರಿಷ್ಕರಣೆ ಕುರಿತು ಪಕ್ಷದ ಕಾರ್ಯಕರ್ತರು, ಮತಗಟ್ಟೆ ಏಜೆಂಟರು ಎಚ್ಚರ ವಹಿಸಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.
ಪಟ್ಟಣದ ಶಾಂಭವಿ ಯೋಗೇಶ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಕಲೇಶಪುರ ವಿಧಾನಸಭಾ ಕ್ಷೇತ್ರ (ಆಲೂರು, ಕಟ್ಟಾಯ ಹಾಗೂ ಸಕಲೇಶಪುರ) ವ್ಯಾಪ್ತಿಯ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ನಾಯಕರಿಗೆ ಪ್ರಜಾಸತ್ತಾತ್ಮಕವಾಗಿ ಚುನಾವಣೆ ಎದುರಿಸಿ ಗೆಲ್ಲಲು ಆಗುವುದಿಲ್ಲ. ಹಾಗಾಗಿ ಬಿಜೆಪಿ ವಿರೋಧಿ ಮತದಾರರನ್ನು ಪಟ್ಟಿಯಿಂದ ಹೊರ ಹಾಕುವ ಷಡ್ಯಂತ್ರ ನಡೆಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತರು ಎಚ್ಚೆತ್ತು ಜೂ.30ರಿಂದ ಜು.29ರ ವರೆಗೆ ನಡೆಯುವ ಪರಿಷ್ಕರಣೆಯನ್ನು ಯಾರೂ ಲಘುವಾಗಿ ಪರಿಗಣಿಸಬಾರದು. ಮತಗಟ್ಟೆ ಏಜೆಂಟರು ಮನೆ ಮನೆಗೆ ಭೇಟಿ ನೀಡಿ ಅರಿವು, ನೆರವು ನೀಡಬೇಕು. ಅರ್ಹ ಮತದಾರರು ಹೊರಗೆ ಉಳಿಯದಂತೆ ನಿಗಾ ವಹಿಸಬೇಕು ಎಂದು ತಿಳಿಸಿದರು.
ಸಕಲೇಶಪುರ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮುರಳಿ ಮೋಹನ್ ಮಾತನಾಡಿ, ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭವಾಗಿದೆ. ಪ್ರತಿಯೊಂದು ಮತವೂ ಅಮೂಲ್ಯವಾಗಿದ್ದು, ಪಕ್ಷದ ಕಾರ್ಯಕರ್ತರು ಹದ್ದಿನ ಕಣ್ಣಿನಂತೆ ಎಚ್ಚರಿಕೆ ವಹಿಸಬೇಕು. ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪ್ರತಿಯೊಂದು ಮತವೂ ನಿರ್ಣಾಯಕವಾಗಲಿದೆ. ತಾಲೂಕಿನ 263 ಬೂತ್‌ಗಳಲ್ಲಿ ವಿನಾಕಾರಣ ಯಾವುದೇ ಮತಗಳು ನಷ್ಟವಾಗದಂತೆ ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕು. ದೇಶದಲ್ಲಿ ಕಾಂಗ್ರೆಸ್ ಸಂಘಟನಾತ್ಮಕವಾಗಿ ಬಲಪಡಿಸುವ ನಿಟ್ಟಿನಲ್ಲಿ ನೂತನ ಕೆಪಿಸಿಸಿ ಅಧ್ಯಕ್ಷರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರು ಇದಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರೇವಣ್ಣ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಕೆಪಿಸಿಸಿ ಕಾರ್ಯಾಧ್ಯಕ್ಷ ಶಶಿಧರ್, ಸಕಲೇಶಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು, ಆಲೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪೃಥ್ವಿ ಜಯರಾಮ್, ಸಕಲೇಶಪುರ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಮುಫೀಸ್ ಅವರು ಸೇರಿದಂತೆ ಆಲೂರು ಕಟ್ಟಾಯ ಹಾಗೂ ಸಕಲೇಶಪುರ ತಾಲೂಕಿನ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಹಂತದ ಪದಾಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net