ತಹಸೀಲ್ದಾರ್ ಪ್ರಯಾಣಿಸುತ್ತಿದ್ದ ಜೀಪ್-ಬೈಕ್

ಜಮ್ಮಿದ್
ಜಮ್ಮಿದ್
Published on
ಆಲೂರು: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-75ರ ಈಶ್ವರಹಳ್ಳಿ ಕೂಡಿಗೆ ಸರ್ಕಲ್ ಬಳಿ ಸೋಮವಾರ ತಹಸೀಲ್ದಾರ್ ಪ್ರಯಾಣಿಸುತ್ತಿದ್ದ ಜೀಪ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಹಾಸನ ನಗರದ ಪೆನ್ಷನ್ ಮೊಹಲ್ಲಾ ನಿವಾಸಿ ಜಮ್ಮಿದ್ (58) ಮೃತಪಟ್ಟವರು. ಗಾಯಗೊಂಡಿರುವ ನದೀಮ್ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಮ್ಮಿದ್ ಹಾಗೂ ನದೀಮ್ ಇಬ್ಬರೂ ಬೆಳಗ್ಗೆ ಬೈಕ್‌ನಲ್ಲಿ ಸಕಲೇಶಪುರದ ಕಡೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈಶ್ವರಹಳ್ಳಿ ಕೂಡಿಗೆ ಸರ್ಕಲ್ ಬಳಿ ಎದುರು ದಿಕ್ಕಿನಿಂದ ಬಂದ ಸಕಲೇಶಪುರ ತಹಸೀಲ್ದಾರ್ ಸುಪ್ರಿತಾ ಅವರ ಸರ್ಕಾರಿ ಜೀಪ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಜಮ್ಮಿದ್ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನದೀಮ್‌ಗೆ ಕೈ-ಕಾಲು, ತಲೆಗೆ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಹಶೀಲ್ದಾರ್ ಸುಪ್ರಿತಾ ಅವರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ತಕ್ಷಣ ಚಿಕಿತ್ಸೆ ಕೊಡಿಸುವಲ್ಲಿ ನೆರವಾಗಿದ್ದಾರೆ.
ಘಟನೆಯ ಮಾಹಿತಿ ತಿಳಿದು ಆಲೂರು ಪಟ್ಟಣದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿಸಿದ್ದಾರೆ. ಆಲೂರು ನಗರ ಪೊಲೀಸರು ಜೀಪ್ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net