ವಹ್ನಿ ಪುಷ್ಕರಣಿಯಲ್ಲಿ ಮತ್ಸ್ಯಗಳ ಚಿನ್ನಾಟ

ಅರಕಲಗೂಡು ತಾಲೂಕಿನ ರಾಮನಾಥಪುರದ ಕಾವೇರಿ ನದಿ ವಹ್ನಿ ಪುಷ್ಕರಣಿ ತಟ ಭಕ್ತರಿಂದ ತುಂಬಿ ತುಳುಕುತ್ತಿದ್ದು ಮೀನುಗಳಿಗೆ ಪುರಿ, ಕಡಲೆಕಾಯಿ ಎಸೆದು ಕಣ್ತುಂಬಿಕೊಳ್ಳುತ್ತಿರುವ ಭಕ್ತರು.
ಅರಕಲಗೂಡು ತಾಲೂಕಿನ ರಾಮನಾಥಪುರದ ಕಾವೇರಿ ನದಿ ವಹ್ನಿ ಪುಷ್ಕರಣಿ ತಟ ಭಕ್ತರಿಂದ ತುಂಬಿ ತುಳುಕುತ್ತಿದ್ದು ಮೀನುಗಳಿಗೆ ಪುರಿ, ಕಡಲೆಕಾಯಿ ಎಸೆದು ಕಣ್ತುಂಬಿಕೊಳ್ಳುತ್ತಿರುವ ಭಕ್ತರು.
Published on

ಪ್ರಮುಖ ಮುಖ್ಯಾಂಶಗಳು

  • ರಾಮನಾಥಪುರದಲ್ಲಿ ಕಣ್ತುಂಬಿಕೊಳ್ಳಲು ಅಪಾರ ಭಕ್ತರು ಭೇಟಿ
  • ಶ್ರೀ ರಾಮೇಶ್ವರ ದೇವಸ್ಥಾನ ಸನ್ನಿಧಿಯ ಕಾವೇರಿ ನದಿಯಲ್ಲಿ ಮೀನುಗಳೇ ಆಕರ್ಷಣೆ
  • ಜಿಗಿಯುವ ಮೀನುಗಳನ್ನು ಕಂಡು ಖುಷಿಪಡುವ ಚಿಣ್ಣರು
ಅರಕಲಗೂಡು: ತಾಲೂಕಿನ ರಾಮನಾಥಪುರದ ಪ್ರಸಿದ್ಧ ಕಾವೇರಿ ವಹ್ನಿ ಪುಷ್ಕರಣಿಯ ಮತ್ಸ್ಯರಾಶಿಗಳು ಭಕ್ತರನ್ನು ಸೆಳೆಯುವ ಆಕರ್ಷಣೀಯ ತಾಣವಾಗಿವೆ.
ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನ ಸನ್ನಿಧಿಯಲ್ಲಿ ಹರಿಯುವ ಕಾವೇರಿ ನದಿಯ ವಹ್ನಿ ಪುಷ್ಕರಣಿಯಲ್ಲಿ ಸಾವಿರಾರು ಮೀನುಗಳು ನೆಲೆಸಿವೆ. ಅಂದ, ಚಂದದ ಗಾತ್ರದಲ್ಲಿರುವ ಮೀನುಗಳನ್ನು ನೋಡಿ ಆನಂದಿಸಲು ಅಪಾರ ಭಕ್ತರು ಭೇಟಿ ನೀಡಿ ಕಣ್ತುಂಬಿಕೊಳ್ಳುತ್ತಾರೆ. ಇದೀಗ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಭಕ್ತರು ಮೀನುಗಳನ್ನು ನೋಡಲು ತಂಡೋಪತಂಡವಾಗಿ ಆಗಮಿಸುತ್ತಿದ್ದು ಜಾತ್ರೆಯ ಸಂಭ್ರಮವನ್ನು ಸಾಕ್ಷೀಕರಿಸುತ್ತಿದೆ.
ನಿತ್ಯ ಜಾತ್ರೆಗೆ ಬರುವ ಸಹಸ್ರಾರು ಭಕ್ತರು ಕಾವೇರಿ ನದಿಯಲ್ಲಿ ಮಿಂದು ದೇವಸ್ಥಾನದಲ್ಲಿ ಪೂಜಾ ಕಾರ್ಯಗಳನ್ನು ಪೂರೈಸಿದ ನಂತರ ವಹ್ನಿ ಪುಷ್ಕರಣಿಗೆ ಭೇಟಿ ನೀಡದೆ ಹಿಂದಿರುಗುವುದಿಲ್ಲ. ವಹ್ನಿ ಪುಷ್ಕರಣಿ ತಟದಲ್ಲಿ ಮೀನುಗಳಿಗೆ ಕಡಲೆಕಾಯಿ, ಕುರುಕಲು ತಿಂಡಿಗಳನ್ನು ಆಹಾರವಾಗಿ ಎಸೆಯುತ್ತಿದ್ದು ಒಂದರ ಮೇಲೊಂದು ಮೇಲೆದ್ದು ಈಜುವ ಮೀನುಗಳ ಕಲವರ ಭಕ್ತರ ಕಣ್ಮನ ತಣಿಸುತ್ತಿದೆ.
ಬೇಸಿಗೆಯಲ್ಲಿ ಆಹಾರ ಕೊರತೆ
ಶ್ರೀಕ್ಷೇತ್ರದಲ್ಲಿ ಮಾರ್ಗಶಿರ ಮಾಸದಲ್ಲಿ ತಿಂಗಳ ಕಾಲ ನಡೆಯುವ ಜಾತ್ರೆ ಸಮಯದಲ್ಲಿ ಮೀನುಗಳಿಗೆ ಆಹಾರದ ಕೊರತೆ ಕಾಡುವುದಿಲ್ಲ. ಮತ್ಸ್ಯರಾಶಿ ಕಣ್ತುಂಬಿಕೊಳ್ಳುವ ಸಲುವಾಗಿ ಜಾತ್ರೆಗೆ ಬರುವ ಸಹಸ್ರಾರು ಭಕ್ತರು ಕಡಲೆಪುರಿ, ಸಿಹಿ ತಿನಿಸುಗಳನ್ನು ಮೀನುಗಳಿಗೆ ನೀಡುತ್ತಾರೆ. ಆದರೆ ಬೇಸಿಗೆಯ ದಿನಗಳಲ್ಲಿ ಶ್ರೀಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ತೀರಾ ಕಡಿಮೆ. ಹೀಗಾಗಿ ವಹ್ನಿ ಪುಷ್ಕರಣಿಗೆ ಜನರು ಭೇಟಿ ನೀಡುವುದಿಲ್ಲ. ಪರಿಣಾಮವಾಗಿ ಮೀನುಗಳಿಗೆ ಆಹಾರದ ಕೊರತೆ ವಿಪರೀತವಾಗಿದೆ. ನದಿ ನೀರು ತಗ್ಗಿದ್ದರಿಂದ ಆಹಾರ ಅರಸಿಕೊಂಡು ಕೆಲವು ಮೀನುಗಳು ವಹ್ನಿ ಪುಷ್ಕರಣಿಯಿಂದ ಹೊರಹೋಗುತ್ತಿವೆ. ವಹ್ನಿ ಪುಷ್ಕರಣಿ ದಡಕ್ಕೆ ಬರುವ ಮೀನುಗಳು ಕಳ್ಳರಿಗೆ ಆಹಾರವಾಗುತ್ತಿರುವುದು ದುರಂತವೇ ಸರಿ. ಆಹಾರವಿಲ್ಲದೆ ಕೆಲವು ಮೀನುಗಳು ಪ್ರಾಣ ಕಳೆದುಕೊಳ್ಳುತ್ತಿವೆ.
ಹಿಡಿದು ಸಾಗಿಸುವ ಕೃತ್ಯ ನಿಂತಿಲ್ಲ
ಬೇಸಿಗೆ ಸಮಯದಲ್ಲಿ ನದಿ ನೀರು ಕಡಿಮೆಯಾಗಿ ಆಹಾರ ಕೂಡ ಸಿಗದೆ ಮೀನುಗಳು ಜೀವಿಸಲು ತೊಡಕಾಗಿದೆ. ನದಿ ನೀರು ಕಡಿಮೆಯಾದ ಸಂದರ್ಭದಲ್ಲಿ ಪ್ರತಿವರ್ಷ ಮೀನುಗಳ ಶಿಕಾರಿ ಕೂಡ ನಡೆಸಲಾಗುತ್ತಿದೆ. ರಾತ್ರಿ ವೇಳೆ ಮೀನುಗಳನ್ನು ಹಿಡಿದು ಸಾಗಿಸುವ ಕೃತ್ಯ ನಿಂತಿಲ್ಲ. ಹಲವಾರು ವರ್ಷಗಳಿಂದ ಮೀನುಗಳನ್ನು ಕದ್ದು ಸಾಗಿಸುತ್ತಿರುವವರನ್ನು ಪತ್ತೆಹಚ್ಚಿ ಬಂಧಿಸುವಂತೆ ಸ್ಥಳೀಯರು ಒತ್ತಾಯಿಸುತ್ತ ಬಂದಿದ್ದರೂ ಪ್ರಯೋಜನವಾಗಿಲ್ಲ.
ಹಲವು ಸಲ ಮೀನುಗಳನ್ನು ಕದಿಯಲು ಬಂದಿದ್ದ ಕಳ್ಳರು ಅಲ್ಲಿಯೇ ಬಿಟ್ಟು ಹೋಗಿದ್ದ ಭಾರಿ ಗಾತ್ರದ ಮೀನು ಅಸುನೀಗಿತ್ತು. ಸ್ಥಳೀಯರು ಸತ್ತ ಮೀನು ಹೊತ್ತು ರಾಮನಾಥಪುರದಲ್ಲಿ ಕೆಲ ಸಲ ಪ್ರತಿಭಟನೆ ನಡೆಸುವ ಮೂಲಕ ಮೀನುಗಳಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿದ್ದರು. ಪ್ರತಿವರ್ಷ ಬೇಸಿಗೆ ಸಮಯದಲ್ಲಿ ನೀರು ನಿಲ್ಲುವಂತೆ ಸೂಕ್ತ ತಡೆಗೋಡೆ ಹಾಕಿ ಮರಳು ಮೂಟೆ ಕಟ್ಟದೆ ವಹ್ನಿ ಪುಷ್ಕರಣಿಯಲ್ಲಿರುವ ಅಪಾರ ಮೀನುಗಳು ಹೊರ ಹೋಗುತ್ತಿವೆ. ಸಿಸಿ ಕ್ಯಾಮರಾ ಇಲ್ಲದ ಕಾರಣ ನೀರು ಕಡಿಮೆಯಾಗಿರುವ ಅವಕಾಶ ಕಾದು ಕಳ್ಳರು ಕೂಡ ರಾತ್ರಿವೇಳೆ ರಾಜಾರೋಷವಾಗಿ ಭಾರಿ ಗಾತ್ರದ ಮೀನುಗಳನ್ನು ಹಿಡಿಯುವ ಕೃತ್ಯಕ್ಕೆ ಕಡಿವಾಣ ಬಿದ್ದಿಲ್ಲ. ಪರಿಣಾಮವಾಗಿ ದೇವರ ಪ್ರತಿರೂಪವೆಂದು ಭಕ್ತರು ನಂಬಿರುವ ಮತ್ಯ್ಸರಾಶಿಗಳ ಜೀವಕ್ಕೆ ಬೆಲೆಯೇ ಇಲ್ಲವಾಗಿದೆ. ಈ ಪುಷ್ಕರಣಿಯ ಒಂದು ಕಿ.ಮೀ. ಅಂತರದಲ್ಲಿ ಯಾವುದೇ ರೀತಿಯ ಮೀನುಗಳನ್ನು ಹಿಡಿಯಬಾರದೆಂದು ಸರ್ಕಾರ ನಿಷೇಧವನ್ನು ಗಾಳಿಗೆ ತೂರಲಾಗಿದೆ.
ನಶಿಸುವ ಆತಂಕ
ನಿರ್ವಹಣೆ ಕೊರತೆಯಿಂದಾಗಿ ಬೇಸಿಗೆಯಲ್ಲಿ ನದಿ ನೀರು ಇಳಿಕೆಯಾಗಿ ಮೀನುಗಳಿಗೆ ಜೀವಸೆಲೆ ಸಿಗದೆ ಮತ್ಸ್ಯರಾಶಿ ನಶಿಸುವ ಆತಂಕ ಎದುರಾಗಿದೆ. ಮೀನುಗಳು ಕಳ್ಳರ ಪಾಲಾಗುವುದನ್ನು ತಡೆಗಟ್ಟಬೇಕು. ರಾತ್ರಿ ವೇಳೆ ಕಾವಲುಗಾರರನ್ನು ನೇಮಿಸಬೇಕು. ವಹ್ನಿ ಪುಷ್ಕರಣಿಗೆ ಫೋಕಸ್ ಲೈಟ್ ಹಾಗೂ ಸಿಸಿ ಕ್ಯಾಮರಾ ಅಳವಡಿಸಬೇಕು. ಮೀನುಗಾರಿಕೆ ಇಲಾಖೆ ಮೀನಮೇಷ ಎಣಿಸದೆ ವಹ್ನಿ ಪುಷ್ಕರಣಿಯಲ್ಲಿರುವ ಮೀನುಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯರು.
ಈ ಪುಣ್ಯ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಕ್ಷೇತ್ರವಾಗಿಸಬೇಕು. ನಿತ್ಯ ಮೀನುಗಳಿಗೆ ಆಹಾರ ನೀಡುವ ವ್ಯವಸ್ಥೆ ಆಗಬೇಕು. ಬೇಸಿಗೆಯಲ್ಲಿ ಮೀನುಗಳಿಗೆ ರಕ್ಷಣೆ ಒದಗಿಸಬೇಕು. ಇಂಥ ಪುಷ್ಕರಣಿಯಲ್ಲಿ ಮತ್ಯ್ಸ ರಾಶಿ ಕಳೆದುಕೊಂಡರೆ ಬಹುದೊಡ್ಡ ನಷ್ಟವಾಗುತ್ತದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿ ವಹ್ನಿ ಪುಷ್ಕರಣಿ ಅಭಿವೃದ್ಧಿ ಪಡಿಸಿ ಭಕ್ತರು ಮೀನುಗಳನ್ನು ಕಣ್ತುಂಬಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಮತ್ಸ್ಯಪೂಜೆ ನಡೆಸಲು ಅಗತ್ಯ ಕ್ರಮ ವಹಿಸಬೇಕು. ಈ ಮೀನುಗಳ ಸಂತತಿಯನ್ನು ತಲೆಮಾರುಗಳವರೆಗೆ ಕಾಪಾಡಬೇಕು ಎಂಬುದು ಭಕ್ತರ ಒತ್ತಾಸೆಯಾಗಿದೆ.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯಿಂದ ವಹ್ನಿ ಪುಷ್ಕರಣಿ ತಟದಲ್ಲಿ ಹುಣ್ಣಿಮೆ ಪೂಜೆ ನಡೆಸಲಾಗುತ್ತಿದೆ. ನೀರು ಕಲುಷಿತಗೊಳ್ಳದಂತೆ ಕಾವೇರಿ ನದಿಯಲ್ಲಿ ಕೊಳೆತು ನಾರುತ್ತಿದ್ದ ಹಳೇ ಬಟ್ಟೆಗಳು, ಹೂವಿನ ತ್ಯಾಜ್ಯ ಊಟ ಮಾಡಿ ಬಿಸಾಡಿದ ಊಟದ ಎಲೆಗಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಆಗಾಗ ಹೊರ ತೆಗೆದು ಶುಚಿತ್ವಕ್ಕೆ ಒತ್ತು ನೀಡಲಾಗಿದೆ. ಈ ಕ್ಷೇತ್ರವನ್ನು ಧಾರ್ಮಿಕವಾಗಿ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ರೂಪಿಸಬೇಕು.
ಎಂ.ಎನ್.ಕುಮಾರಸ್ವಾಮಿ ಜಿಲ್ಲಾಧ್ಯಕ್ಷ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ
ರಾಮನಾಥಪುರ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ವಹ್ನಿ ಪುಷ್ಕರಣಿ ತಟದ ಮೆಟ್ಟಿಲುಗಳ ಬಳಿ ಶುಚಿಗೊಳಿಸಿ ಬಣ್ಣ ಬಳಿದು ಸಿಂಗರಿಸಲಾಗಿದೆ. ಸಾಕಷ್ಟು ಭಕ್ತರು ಮೀನುಗಳನ್ನು ನೋಡಲು ಆಗಮಿಸುತ್ತಿದ್ದು ವಹ್ನಿ ಪುಷ್ಕರಣಿ ತಟ ಭಕ್ತರಿಂದ ತುಂಬಿ ತುಳುಕುತ್ತಿದೆ. ಬೇಸಿಗೆ ಸಮಯದಲ್ಲಿ ವಹ್ನಿ ಪುಷ್ಕರಣಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ನದಿಗೆ ಮರಳುಮೂಟೆ ಕಟ್ಟಿ ನೀರು ನಿಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಕುಮಾರಸ್ವಾಮಿ ರಾಮನಾಥಪುರ ಗ್ರಾಪಂ ಪಿಡಿಒ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net