ಅರಸೀಕೆರೆ ಗ್ರಾಮ ದೇವತೆಯರಾದ ಶ್ರೀ ಕರಿಯಮ್ಮ ಮತ್ತು ಶ್ರೀ ಮಲ್ಲಿಗೆಮ್ಮ ದೇವಿಯರ 57ನೇ ವರ್ಷದ ಮಹಾರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವವಾಗಿ ಗುರುವಾರ ಜರುಗಿತು.
Published on:
Copied
Follow Us
ಅರಸೀಕೆರೆ: ಗ್ರಾಮ ದೇವತೆಯರಾದ ಶ್ರೀ ಕರಿಯಮ್ಮ ಮತ್ತು ಶ್ರೀ ಮಲ್ಲಿಗೆಮ್ಮ ದೇವಿಯರ 57ನೇ ವರ್ಷದ ಮಹಾರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವವಾಗಿ ಗುರುವಾರ ಜರುಗಿತು.
ರಥೋತ್ಸವಕ್ಕೂ ಮುನ್ನ ಶೃಂಗರಿಸಿದ್ದ ರಥದ ಮೇಲೆ ಪುಷ್ಪಾಲಂಕಾರದೊಂದಿಗೆ ಕಂಗೊಳಿಸುತ್ತಿದ್ದ ಶ್ರೀ ಕರಿಯಮ್ಮ ಮತ್ತು ಶ್ರೀ ಮಲ್ಲಿಗೆಮ್ಮ ದೇವಿಯರ ಉತ್ಸವಮೂರ್ತಿಯನ್ನು ರಥದ ಮೇಲೆ ಪ್ರತಿಷ್ಠಾಪಿಸಿ ಮಹಾ ಮಂಗಳಾರತಿ ಬೆಳಗುತ್ತಿದ್ದಂತೆ ಈ ಶುಭಗಳಿಗೆ ಕಾಯುತ್ತಿದ್ದ ಭಕ್ತರ ದಂಡು ಗ್ರಾಮ ದೇವತೆಯರ ನಾಮಸ್ಮರಣೆ ಮಾಡುತ್ತ ರಥವನ್ನು ಎಳೆದರು.
ಗ್ರಾಮ ದೇವತೆಯ ರಥೋತ್ಸವವಾಗಿರುವುದರಿಂದ ಸಹಜವಾಗಿಯೇ ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಲ್ಲದೆ ನೂತನ ವಧು-ವರರು ಹಾಗೂ ಮದುವೆಯಾಗಿ ಹೊರ ಊರಿಗೆ ಹೋಗಿದ್ದ ಹೆಣ್ಣು ಮಕ್ಕಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಗ್ರಾಮ ದೇವತೆಯರ ದರ್ಶನ ಮಾಡಿದರೆ ಮನದ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನೂತನ ವಧು-ವರರು ಹಾಗೂ ಮಹಿಳಾ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಕಾಣುವುದು ವಿಶೇಷ.
ರಥೋತ್ಸವದ ಸಂದರ್ಭದಲ್ಲಿ ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ, ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಶೇಖರ್ ಸೇರಿದಂತೆ ಗ್ರಾಮ ದೇವತೆ ಶ್ರೀ ಕರಿಯಮ್ಮ ಮತ್ತು ಶ್ರೀ ಮಲ್ಲಿಗೆಮ್ಮ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ದೇವಸ್ಥಾನದ ಅಭಿವೃದ್ಧಿ ಸಮಿತಿ ವತಿಯಿಂದ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ರಾತ್ರಿ ಊರ ಒಳಗಿನ ಶ್ರೀ ಮಲ್ಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ಮಣೆ ಆಡಿಸುವುದರೊಂದಿಗೆ ಗ್ರಾಮ ದೇವತೆಯರ 57ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.