ವಿದ್ಯುತ್ ವಿತರಣಾ ಜಾಲ ಖಾಸಗಿ ಪಾಲಾಗದಿರಲಿ

ರಾಜ್ಯದ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಮಾಡಲು ಟಾಟಾ ಪವರ್ ಕಂಪನಿಯು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಿರುವುದನ್ನು ಖಂಡಿಸಿ ನೌಕರರ ಒಕ್ಕೂಟವು ಸೋಮವಾರ ಸೆಸ್ಕ್ ವಿಭಾಗೀಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.
ರಾಜ್ಯದ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಮಾಡಲು ಟಾಟಾ ಪವರ್ ಕಂಪನಿಯು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಿರುವುದನ್ನು ಖಂಡಿಸಿ ನೌಕರರ ಒಕ್ಕೂಟವು ಸೋಮವಾರ ಸೆಸ್ಕ್ ವಿಭಾಗೀಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.
Published on

ಪ್ರಮುಖ ಮುಖ್ಯಾಂಶಗಳು

  • electricity distribution
ಚನ್ನರಾಯಪಟ್ಟಣ: ರಾಜ್ಯದ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಮಾಡಲು ಟಾಟಾ ಪವರ್ ಕಂಪನಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಿರುವುದನ್ನು ಖಂಡಿಸಿ ನೌಕರರ ಒಕ್ಕೂಟವು ಸೋಮವಾರ ಸೆಸ್ಕ್ ವಿಭಾಗೀಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.
ಕೆಪಿಟಿಸಿಎಲ್ 659 ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯ ಹರೀಶ್ ಮಾತನಾಡಿ, ಇಂಧನ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿರುವುದರಿಂದ ಮುಂದಿನ ದಿನದಲ್ಲಿ ಪ್ರತಿಯೊಬ್ಬರಿಗೂ ತೊಂದರೆಯಾಗಲಿದೆ. ಒಕ್ಕೂಟವು ರಾಜ್ಯದ ಎಲ್ಲ್ಲ ವರ್ಗದ ಗ್ರಾಹಕರ ಮತ್ತು ಎಸ್ಕಾಂಗಳ ನೌಕರರ ಹಿತ ಕಾಯಲು ಬದ್ಧವಾಗಿದೆ. ರಾಜ್ಯದಲ್ಲಿ ಅದ್ಭುತ ತಾಂತ್ರಿಕ ಸಾಮರ್ಥ್ಯ, ಮೂಲಸೌಕರ್ಯ ಮತ್ತು ಸುಗಮ ಆಡಳಿತ ನಿರ್ವಹಣೆ ಇರುವಾಗ ರಾಜ್ಯದ ವಿದ್ಯುತ್ ವಿತರಣಾ ಜಾಲವನ್ನು ಹೊರ ರಾಜ್ಯದ ಖಾಸಗಿ ಸಂಸ್ಥೆಗೆ ಹಸ್ತಾಂತರಿಸಲು ಬಿಡುವುದಿಲ್ಲ. ಕೆಇಆರ್‌ಸಿ, ವಿದ್ಯುತ್ ವಿತರಣಾ ಜಾಲದ ಖಾಸಗೀಕರಣ ನಿರ್ಧಾರ ಕೈಬಿಟ್ಟು ಟಾಟಾ ಪವರ್ ಸಂಸ್ಥೆಯ ಅರ್ಜಿಯನ್ನು ತಿರಸ್ಕರಿಸಬೇಕು. ಕೆಪಿಟಿಸಿಎಲ್ ಹಾಗೂ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣೆಗೆ ಟಾಟಾ ಪವರ್ ಕಂಪನಿ ಪರವಾನಗಿ ಪಡೆಯುತ್ತಿರುವುದು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ವ್ಯವಸ್ಥಿತ ಸಂಚು. ಹೀಗಾಗಿ ಪರವಾನಗಿ ನೀಡುವುದಕ್ಕೆ ಆಕ್ಷೇಪಣೆ ಸಲ್ಲಿಸಬೇಕು ಎಂದರು.
ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣ ಮಾತನಾಡಿ, ಸರ್ಕಾರ ರಾಜ್ಯದ ವಿದ್ಯುತ್ ವಿತರಣಾ ವಲಯವನ್ನು ಕಾರ್ಪೊರೇಟ್ ಕಂಪನಿಗಳಿಗೆ ಧಾರೆ ಎರೆಯಲು ಹೊರಟಿದೆ. ರಾಜ್ಯದ ಜನತೆಯ ಆಸ್ತಿಯಾಗಿರುವ ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುವುದು ಅಪಾಯಕಾರಿ ನಡೆ. ಸರ್ಕಾರದ ಈ ಕ್ರಮ ನೌಕರರ ವಿರೋಧಿಯಷ್ಟೆ ಅಲ್ಲದೆ, ರಾಜ್ಯದ ಗ್ರಾಹಕರ ಹಿತಾಸಕ್ತಿಗೆ ಮಾರಕವಾಗಿದೆ. ರೈತರಿಗೆ ಸರ್ಕಾರ ಹಲವು ಯೋಜನೆಯಡಿ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಅಂತಹವರಿಗೆ ತೊಂದರೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ರಾಜ್ಯದ ಎಲ್ಲ ಎಸ್ಕಾಂಗಳು ಈಗಾಗಲೇ ನುರಿತ ಸಿಬ್ಬಂದಿ, ಸಾವಿರಾರು ಕೋಟಿ ರೂ. ಮೌಲ್ಯದ ವಿದ್ಯುತ್ ವಿತರಣಾ ಜಾಲ, ಉಪಕೇಂದ್ರಗಳು ಹಾಗೂ ಯಂತ್ರೋಪಕರಣಗಳ ಬೃಹತ್ ಮೂಲಸೌಕರ್ಯ ಹೊಂದಿವೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾದ ಈ ಬೃಹತ್ ವ್ಯವಸ್ಥೆಯನ್ನು ಲಾಭದಾಸೆಗೆ ಹೊರ ರಾಜ್ಯದ ಖಾಸಗಿ ಸಂಸ್ಥೆಗೆ ವಹಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನುಗ್ಗೆಹಳ್ಳಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತ ವಜ್ರ ಕುಮಾರ್ ಮಾತನಾಡಿ, ಇಂಧನ ಇಲಾಖೆಯಲ್ಲಿ ಸದ್ಯ 35 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದರೂ, ಹಾಲಿ ಸಿಬ್ಬಂದಿ ಅತಿಯಾದ ಕಾರ್ಯ ಒತ್ತಡದ ನಡುವೆಯೂ ಗುಣಮಟ್ಟದ ಸೇವೆ ನೀಡುತ್ತಿದ್ದಾರೆ. ಖಾಸಗೀಕರಣದಿಂದ ಹೊಸ ಉದ್ಯೋಗ ಸೃಷ್ಟಿ ಸ್ಥಗಿತಗೊಳ್ಳುತ್ತದೆ. ಹಾಲಿ ಇರುವ ಗುತ್ತಿಗೆ, ಹೊರಗುತ್ತಿಗೆ ಹಾಗೂ ಕಾಯಂ ನೌಕರರ ಉದ್ಯೋಗ ಭದ್ರತೆ ಮತ್ತು ಹಿತಾಸಕ್ತಿಗೆ ಧಕ್ಕೆಯಾಗಲಿದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಗೃಹಜ್ಯೋತಿ ಯೋಜನೆ ಸ್ಥಗಿತಗೊಳ್ಳುವ ಅಪಾಯ ಇದೆ. ಸಾಮಾಜಿಕ ಬದ್ಧತೆಯಿಲ್ಲದ ಖಾಸಗಿ ಕಂಪನಿಗಳು ಮನಬಂದಂತೆ ವಿದ್ಯುತ್ ದರ ಹೆಚ್ಚಿಸಿ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಶೋಷಿಸುತ್ತವೆ ಎಂದರು.
ಇದೇ ವೇಳೆ ಕೆಇಆರ್‌ಸಿಗೆ ಆಕ್ಷೇಪಣೆ ಸಲ್ಲಿಸಲು 2026ರ ಜೂ.23ರವರೆಗೆ ಮಾತ್ರ ಸಮಯ ನೀಡಲಾಗಿದೆ. ಹೀಗಾಗಿ ನೌಕರರು ಹಾಗೂ ಸಾರ್ವಜನಿಕರು, ರೈತರು ಪ್ರಸ್ತಾವನೆ ವಿರುದ್ಧ ಕೆಇಆರ್‌ಸಿಗೆ ಆಕ್ಷೇಪಣೆ ಸಲ್ಲಿಸಲು ಒತ್ತಾಯಿಸಿದರು.
ಸಹಾಯಕ ಕಾರ್ಯ ಪಾಲಕ ಅಭಿಯಂತ ಸತೀಶ್, ಕೆಪಿಟಿಸಿಎಲ್ 659 ನೌಕರರ ಸಂಘದ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ಮಂಜುನಾಥ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮಲ್ಲಪ್ಪಚಾರ್, ಇಲಾಖೆಯ ಸಹಾಯಕ ಅಭಿಯಂತರರು, ಶಾಖಾಧಿಕಾರಿಗಳು, ಗುತ್ತಿಗೆದಾರರು ಸೇರಿದಂತೆ ಚನ್ನರಾಯಪಟ್ಟಣ ವಿಭಾಗದ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net