ಮಠ ಮಾನ್ಯಗಳಿಂದಲೇ ದೇಶ ಉಳಿವು ಸಾಧ್ಯ

ಅರಕಲಗೂಡು ತಾಲೂಕಿನ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಠದ ಉತ್ತರಾಧಿಕಾರಿಗಳಿಗೆ ಸಂನ್ಯಾಸ ದೀಕ್ಷೆ ಮತ್ತು ಶಿಷ್ಯ ಸ್ವೀಕಾರ ಸಮಾರಂಭದಲ್ಲಿ ಉತ್ತರಾಧಿಕಾರಿ ಜ್ಞಾನಗನ ಶ್ರೀಗಳ ಪಾಲಕರಾದ ಶ್ರೇಯಸ್ ಜಗದಂಬಾ ಅವರನ್ನು ಎಚ್.ಡಿ. ಕುಮಾರಸ್ವಾಮಿ ಸನ್ಮಾನಿಸಿದರು. ಎ. ಮಂಜು, ಸಾ.ರಾ. ಮಹೇಶ್ ಇತರರಿದ್ದರು.
ಅರಕಲಗೂಡು ತಾಲೂಕಿನ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಠದ ಉತ್ತರಾಧಿಕಾರಿಗಳಿಗೆ ಸಂನ್ಯಾಸ ದೀಕ್ಷೆ ಮತ್ತು ಶಿಷ್ಯ ಸ್ವೀಕಾರ ಸಮಾರಂಭದಲ್ಲಿ ಉತ್ತರಾಧಿಕಾರಿ ಜ್ಞಾನಗನ ಶ್ರೀಗಳ ಪಾಲಕರಾದ ಶ್ರೇಯಸ್ ಜಗದಂಬಾ ಅವರನ್ನು ಎಚ್.ಡಿ. ಕುಮಾರಸ್ವಾಮಿ ಸನ್ಮಾನಿಸಿದರು. ಎ. ಮಂಜು, ಸಾ.ರಾ. ಮಹೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅಭಿಮತ
ಅರಕಲಗೂಡು : ಹಿಂದೂ ಸಂಸ್ಕೃತಿ ಕ್ಷೀಣಿಸದಂತೆ ನೋಡಿಕೊಳ್ಳುವ ಮೂಲಕ ಎಲ್ಲರೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಭಗವದ್ಗೀತೆ ಬೋಧನೆ ಮಾಡಬೇಕಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.
ತಾಲೂಕಿನ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಠದ ಉತ್ತರಾಧಿಕಾರಿಗಳಿಗೆ ಸನ್ಯಾಸ ದೀಕ್ಷೆ ಮತ್ತು ಶಿಷ್ಯ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರ ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ಸಹ ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿ ಮೊದಲ ಸ್ಥಾನದಲ್ಲಿರುವುದನ್ನು ಕಾಣುತ್ತೇವೆ. ಹೀಗಾಗಿ ಮಠ ಮಾನ್ಯಗಳಿಂದಲೇ ದೇಶ ಉಳಿಯಬೇಕಿದ್ದು, ಮಠಾಧೀಶರ ಶ್ರಮ ಬಹಳಷ್ಟಿದೆ ಎಂದರು.
ಪುರಾತನ ಕಾಲದಿಂದಲೂ ನಮ್ಮ ಹಿಂದೂ ಸಂಸ್ಕೃತಿ, ಹಿಂದೂಗಳಲ್ಲಿ ಇದ್ದ ಪರಸ್ಪರ ಅನನ್ಯ ಬಾಂಧವ್ಯ ಈಗ ಕ್ಷೀಣಿಸುತ್ತಿದೆ. ಕುಟುಂಬಗಳಲ್ಲಿ ಕಲಹಗಳು ಹೆಚ್ಚುತ್ತಿವೆ. ಮಾನವೀಯತೆ ಬೆಳೆಸಿಕೊಂಡು ಮೂಲ ಸಂಸ್ಕೃತಿ ಉಳಿಸಿಕೊಳ್ಳಬೇಕಿದೆ ಎಂದು ಪ್ರತಿಪಾದಿಸಿದರು.
ವಿಶ್ವದ ವಾಸ್ತುಶಿಲ್ಪ ಪ್ರಪಂಚಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ. ಆದರೆ ಸಮುದಾಯ ನೀಡಿರುವ ದೊಡ್ಡಮಟ್ಟದ ಕೊಡುಗೆಗೆ ಪ್ರತಿಫಲವಾಗಿ ಅಷ್ಟು ಪ್ರಮಾಣದ ಅಭಿವೃದ್ಧಿ ಕಂಡಿಲ್ಲ. ಇದು ವಿಷಾದನೀಯ ಸಂಗತಿ. ಶ್ರೀಗಳ ಮನವಿ ಮೇರೆಗೆ ಹಾಸನದ ಕೈಗಾರಿಕಾ ಪ್ರದೇಶದಲ್ಲಿ ಸಮುದಾಯಕ್ಕೆ ನಿವೇಶನ ಹಾಗೂ ಸಿಎಸ್‌ಆರ್ ಫಂಡ್ ಒದಗಿಸಲು ಪ್ರಾಮಾಣಿಕವಾಗಿ ನಿಮ್ಮ ಜತೆಗಿರುವುದಾಗಿ ಭರವಸೆ ನೀಡಿದರು.
ಶಾಸಕ ಎ. ಮಂಜು ಮಾತನಾಡಿ, ಅರೇಮಾದನಹಳ್ಳಿ ಮಠದ ಶ್ರೀಗಳು ಹಾಗೂ ನಾನು ಶಾಲೆಯಲ್ಲಿ ಒಂದೇ ಬೆಂಚಿನಲ್ಲಿ ಕೂರುತ್ತಿದ್ದು ಅವರು ಮಠಾಧೀಶರಾಗುವ ಮೂಲಕ ಸಮಾಜ ಸೇವೆಯಲ್ಲಿ ಗುರುತ್ತಿಸಿಕೊಂಡಿದ್ದು ನಾನು ಸಹ ರಾಜಕೀಯದಲ್ಲಿ ಜನಸೇವೆಗೆ ತೊಡಗಿಕೊಂಡಿದ್ದೇನೆ. ಇಬ್ಬರದೂ ಜನಸೇವೆಯೇ ಆಗಿದೆ. ಶ್ರೀಮಠದ ಅಭಿವೃದ್ಧಿ ಕಾರ್ಯಗಳಿಗೆ ನನ್ನ ಸಹಕಾರವಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಅರೇಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ದೇಶಕ್ಕೆ ಅನ್ನ ನೀಡುವ ರೈತನ ಬೆನ್ನೆಲುಬು ವಿಶ್ವಕರ್ಮ ಸಮುದಾಯವಾಗಿದ್ದು, ಅವರಿಗೆ ಎಲ್ಲ ರೀತಿಯ ಉಪಕರಣಗಳನ್ನು ಸಿದ್ದಪಡಿಸಿಕೊಟ್ಟಿದೆ. ಹಿಂದೂ, ಜೈನ, ಬೌದ್ಧ, ಮುಸ್ಲಿಂ, ಕ್ರೈಸ್ತ ಧರ್ಮೀಯರು ಎನ್ನದೆ ಎಲ್ಲರಿಗೂ ದೇವಾಲಯಗಳನ್ನು ನಿರ್ಮಿಸಿಕೊಟ್ಟಿರುವ ವಿಶ್ವಕರ್ಮ ಸಮುದಾಯದ ಸಾಧನೆ ಅವಿಸ್ಮರಣೀಯ. ಬೇಲೂರು ಹಳೇಬೀಡು, ಅಜಂತಾ, ಎಲ್ಲೋರ ಮಾತ್ರವಲ್ಲದೇ ಮೈಸೂರಿನ ಸೇಂಟ್ ಫಿಲೋಮಿನಾ ಚರ್ಚ್, ಶ್ರೀರಂಗಪಟ್ಟಣದ ದರ್ಗಾ ಹಾಗೂ ಅಗ್ರಾ ತಾಜ್ ಮಹಲ್ ಸ್ಥಾಪನೆ ಹಿಂದೆ ವಿಶ್ವಕರ್ಮ ಸಮುದಾಯದ ಶ್ರಮದಿಂದ ಸಾಧ್ಯವಾಗಿದೆ. ಇಷ್ಟೆಲ್ಲ ಶ್ರಮಜೀವಿಗಳಾದ ವಿಶ್ವಕರ್ಮರ ಏಳಿಗೆಗೆ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಸಹಾಯ ಹಸ್ತ ಚಾಚಿಲ್ಲ ಎನ್ನುವುದು ನೋವಿನ ಸಂಗತಿ ಎಂದು ಬೇಸರ ಹೊರಹಾಕಿದರು.
ತಾಲೂಕಿನ ರಾಮನಾಥಪುರದಲ್ಲಿ ಸಮುದಾಯದ ನಿವೇಶನಕ್ಕಾಗಿ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅವರ ಸಹಕಾರ ಮರೆಯುವಂತಿಲ್ಲ. ದೇವೇಗೌಡರ ಕುಟುಂಬ ಕೂಡ ಸಮಾಜದ ಏಳಿಗೆಗೆ ಕೊಡುಗೆ ನೀಡಿದೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಎರಡು ಕೋಟಿ ರೂ. ನೀಡಿದ್ದಾರೆ. ಈಗಿನ ಸರ್ಕಾರವೂ ಒಂದು ಕೋಟಿ ರೂ. ಅನುದಾನ ನೀಡಿದೆ. ಕೇಂದ್ರ ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಂತೆ ಕುಮಾರಸ್ವಾಮಿ ಅವರೂ ಪ್ರಧಾನಮಂತ್ರಿ ಹುದ್ದೆ ಅಲಂಕರಿಸುವಂತಾಗಲಿ ಎಂದು ಆಶಿಸಿದರು.
ಸಿಂಧಗಿ ಅಲಮೇಲ ವಿಶ್ವಬ್ರಾಹ್ಮಣ ಪೀಠಾಧಿಪತಿ ಶ್ರೀ ರಾಮಚಂದ್ರ ಸ್ವಾಮೀಜಿ, ಶಹಪುರ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ, ಚನ್ನಂಗಿ ವಡ್ನಾಳು ಸಾವಿತ್ರಿ ಪೀಠದ ಶ್ರೀ ಶಂಕರಾತ್ಯಾನಂದ ಸರಸ್ವತಿ ಸ್ವಾಮೀಜಿ, ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ, ಮಾಜಿ ಸಚಿವ ಸಾ.ರಾ. ಮಹೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net