ನರೇಗಾ ನಿಯಮ ಬದಲಿಸಿ ಕೇಂದ್ರದಿಂದ ಅನ್ಯಾಯ

 ಹೊಳೆನರಸೀಪುರ ಪಟ್ಟಣದಲ್ಲಿ ನಡೆದ ನೌಕರರ ಸಮ್ಮೇಳನ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಸತೀಶ್ ಜಾರಕಿ ಹೊಳಿ, ಶಾಸಕರಾದ ಶಿವಲಿಂಗೇಗೌಡ ಸಿಮೆಂಟ್ ಮಂಜು ಸಂಸದ ಶ್ರೇಯಸ್ ಎಂ ಪಟೇಲ್ ಇತರರು ಇದ್ದರು
ಹೊಳೆನರಸೀಪುರ ಪಟ್ಟಣದಲ್ಲಿ ನಡೆದ ನೌಕರರ ಸಮ್ಮೇಳನ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಸತೀಶ್ ಜಾರಕಿ ಹೊಳಿ, ಶಾಸಕರಾದ ಶಿವಲಿಂಗೇಗೌಡ ಸಿಮೆಂಟ್ ಮಂಜು ಸಂಸದ ಶ್ರೇಯಸ್ ಎಂ ಪಟೇಲ್ ಇತರರು ಇದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ
  • ಎಸ್ಸಿ-ಎಸ್ಟಿ ನೌಕರರ ಸಮ್ಮಿಲನ ಸಮಾವೇಶ
ಹೊಳೆನರಸೀಪುರ: ನರೇಗಾ ಯೋಜನೆಯ ನಿಯಮಗಳನ್ನು ಬದಲಾಯಿಸುವ ಮೂಲಕ ಕೇಂದ್ರ ಸರ್ಕಾರ ಜನರ ಉದ್ಯೋಗ ಕಿತ್ತುಕೊಂಡಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಸಂಘ ಶನಿವಾರ ಆಯೋಜಿಸಿದ್ದ ನೌಕರರ ಸಮ್ಮಿಲನ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಎಸ್ಸಿ, ಎಸ್ಟಿ ಸಮುದಾಯದವರು ಉದ್ಯೋಗದ ಭರವಸೆಯಲ್ಲಿದ್ದಾರೆ. ಸಮುದಾಯದ ಜನರು ಜೀವನ ನಿರ್ವಹಣೆಗಾಗಿ ಕೆಲಸಗಳನ್ನು ಅವಲಂಬಿಸಿದ್ದಾರೆ. ಇಂತಹ ಬಡಜನರ ದುಡಿಮೆಯ ಮೇಲೆ ಕೇಂದ್ರ ಸರ್ಕಾರ ಚೆಲ್ಲಾಟವಾಡಿದೆ ಎಂದು ಅಸಮಾಧಾನ ಹೊರಹಾಕಿದರು.
ಎಸ್ಸಿ-ಎಸ್ಟಿ ಘನತೆ ಮತ್ತು ಸ್ವಾಭಿಮಾನದ ಸಮುದಾಯ. ಅಂಬೇಡ್ಕರ್ ಅವರ ಚಿಂತನೆಯ ಮೂಲಕ ಸಮಾಜದಲ್ಲಿ ಶಿಕ್ಷಣ ಸಂಘಟನೆ ಮತ್ತು ಹೋರಾಟಗಳ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಸಮಾಜದೊಳಗೆ ಗೊಂದಲ ಸೃಷ್ಟಿಸಬಾರದು. ಇದರಿಂದ ಅಮಾಯಕರಿಗೆ ಅನ್ಯಾಯವಾಗುತ್ತದೆ. ಸಂವಿಧಾನದ ನೆರಳಿನಲ್ಲಿ ಅವೆಲ್ಲವನ್ನು ಮೆಟ್ಟಿ ನಿಂತು ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದರು.
ಯಾವ ಪಕ್ಷದವರೇ ಆಗಿರಲಿ, ನಮ್ಮ ಸಮುದಾಯದ ನಾಯಕರು ಸಮಯ ಸಂದರ್ಭಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಒಡೆದಾಳುವ ದೇಶ ನಮ್ಮದು. ಎಚ್ಚರಿಕೆಯಿಂದ ಒಟ್ಟಾಗಿ ಇರಬೇಕು. ಇಲ್ಲದಿದ್ದರೆ ಯಾವೊಬ್ಬರೂ ಶಾಸಕರಾಗಿ ಆಯ್ಕೆಯಾಗುವುದಿಲ್ಲ ಎಂಬ ಎಚ್ಚರಿಕೆ ನೀಡಿದರು.
ಸಮಾಜದಲ್ಲಿ ತಾರತಮ್ಯಗಳು ಬರಬಾರದು ಎಂಬ ನಿಟ್ಟಿನಲ್ಲಿ ಸಾಮಾಜಿಕ ಬಹಿಷ್ಕಾರದ ಕಾಯ್ದೆ ಜಾರಿಗೆ ತರಲಾಗಿದೆ. ಮೀಸಲಾತಿಗಾಗಿ ಏಕೆ ಹೋರಾಟ ಮಾಡಬೇಕು ಎಂದು ಸಮಾಜದವರನ್ನು ಪ್ರಶ್ನಿಸಿದ್ದರು. ಎಲ್ಲರಂತೆ ನಮ್ಮ ಮಕ್ಕಳು ಪ್ರತಿಭಾವಂತರಿದ್ದಾರೆ. ಅದರಂತೆ ಪ್ರತಿಭಾವಂತರಾಗಿ ಹೊರಹೊಮ್ಮಲಿ, ಆ ನಿಟ್ಟಿನಲ್ಲಿ ಎಸ್ಸಿ-ಎಸ್ಟಿ ಸಮುದಾಯ ಸಾಗಬೇಕು ಎಂದು ಸಲಹೆ ನೀಡಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸಂಘಟನೆಗಳ ಹೋರಾಟ ಸರಿದಾರಿಯಲ್ಲಿದ್ದು, ನಮ್ಮ ಹಕ್ಕುಗಳನ್ನು ಪಡೆಯುವ ಜಾಣ್ಮೆ ನಮ್ಮಲ್ಲಿರಬೇಕು. ಎಸ್ಸಿ-ಎಸ್ಟಿ ಸಮುದಾಯದ ಅನುದಾನ ಸಂಪೂರ್ಣ ಪ್ರಮಾಣದಲ್ಲಿ ದೊರೆತಾಗ ಮಾತ್ರ ಅಭಿವೃದ್ಧಿ ಸಾಧ್ಯ. ನೌಕರರು ಸಮುದಾಯದ ಏಳಿಗೆಗೆ ಸಹಕರಿಸಬೇಕಾಗಿದ್ದು, ಹಂತ ಹಂತವಾಗಿ ಅವರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಪರಿಶಿಷ್ಟ ಪಂಗಡದ ಜನರಿಗೆ ನಿವೇಶನ ಒದಗಿಸುವುದಕ್ಕಾಗಿ ಸರ್ಕಾರಿ ಜಮೀನು ಅಥವಾ ಖರೀದಿ ಮಾಡುವುದರಿಂದ ನಿವೇಶನಗಳನ್ನು ನಿರ್ಮಿಸಿ ಪಿಡಬ್ಲುೃಡಿ ಇಲಾಖೆಯಿಂದ ನೀಡಲು ಮೀಸಲಿರಿಸಿರುವ ಹಣವನ್ನು ನೀಡಲು ಸರ್ಕಾರ ಒಪ್ಪಿಗೆ ನೀಡಿದೆ. ಹಾಗಾಗಿ ಆ ಕೆಲಸದ ಪ್ರಯತ್ನ ಮುಂದುವರಿದಿದೆ ಎಂದು ತಿಳಿಸಿದರು. ದೆಹಲಿಯಲ್ಲಿ 500 ವಿದ್ಯಾರ್ಥಿಗಳು ಉಳಿದುಕೊಳ್ಳುವಂತೆ ಹಾಸ್ಟೆಲ್ ನಿರ್ಮಾಣ ಮಾಡುವ ಪ್ರಕ್ರಿಯೆಗಳು ಚಾಲ್ತಿಯಲ್ಲಿದೆ ಎಂದು ಹೇಳಿದರು.
ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಾತನಾಡಿ, ಎಲ್ಲರಿಗೂ ಸಮಾನ ಹಕ್ಕುಗಳು ಸಿಗಬೇಕು ಎಂದು ಅಂಬೇಡ್ಕರ್ ಸಂವಿಧಾನದಲ್ಲಿ ಬರೆದಿದ್ದಾರೆ. ಬಸವಣ್ಣನವರು ಈ ಮಾತನ್ನು ಹೇಳಿದ್ದಾರೆ. ದಲಿತ ನೌಕರರಿಗೆ ಸರ್ಕಾರಿ ಸೌಲಭ್ಯಗಳು ದೊರಕುತ್ತಿದೆ. ಅದರಲ್ಲೂ ಈ ಸರ್ಕಾರದಲ್ಲಿ ನಿಮಗೆ ಎಲ್ಲ ರೀತಿಯ ಸೌಲಭ್ಯ ದೊರೆತಿದೆ. ಆದ್ದರಿಂದ ನೀವು ಉತ್ತಮ ಕಾರ್ಯಗಳನ್ನು ಮಾಡಿಕೊಂಡು ಇನ್ನೂ ಬಲಿಷ್ಠವಾದ ಸಂಘಟನೆಯನ್ನು ಮಾಡಬೇಕು ಎಂದರು.
ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಇತರ ಸಮುದಾಯದವರಿಗೆ ಬೇರೆ ಬೇರೆ ಆಸ್ತಿಯನ್ನು ಅವರ ಪೂರ್ವಜರು ಬಿಟ್ಟು ಹೋಗಿದ್ದಾರೆ. ಆದರೆ ನಮ್ಮ ಸಮುದಾಯದವರಿಗೆ ಡಾ.ಬಿ.ಆರ್ ಅಂಬೇಡ್ಕರ್ ಅವರು ಕೊಟ್ಟು ಹೋಗಿರುವ ಸಂವಿಧಾನವೇ ಆಸ್ತಿ. ಅಂಬೇಡ್ಕರ್ ಹೇಳಿದ್ದಾರೆ ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದ ಮೇಲೆ ಗರ್ಜಿಸಲೇಬೇಕು ಎಂದು. ಆದರೆ ಈಗ ನಿಮ್ಮನ್ನು ನೋಡಿದರೆ ತಿಳಿಯುತ್ತದೆ ಯಾವ ರೀತಿ ಗರ್ಜನೆ ಮಾಡಬಹುದು ಎಂದರು.
ವೇದಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂಸದ ಶ್ರೇಯಸ್ ಎಂ ಪಟೇಲ್, ವಿಧಾನಪರಿಷತ್ ಸದಸ್ಯ ಕೆ.ಶಿವಕುಮಾರ್, ಕಾ,ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಡಿ.ಪಿ.ದೇವರಾಜು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರಯ್ಯ, ಹಾಸನ ಜಿಲ್ಲಾ ನಗರಾಭಿವೃದ್ಧಿ ಅಧ್ಯಕ್ಷ ಪಟೇಲ್ ಶಿವಪ್ಪ, ಸಕಲೇಶಪುರದ ಕಾಂಗ್ರೆಸ್ ಮುಖಂಡ ಮುರಳಿ, ಸರ್ಕಾರಿ ಅಭಿಯೋಜಕಿ ಸತ್ಯವತಿ, ತಾಲೂಕು ಎಸ್ಸಿ-ಎಸ್ಟಿ ನೌಕರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net