ಜಾತಿ ಪದ್ಧತಿ, ಅಸ್ಪೃಶ್ಯತೆ ವಿರುದ್ಧ ನಡೆದ ಯುದ್ಧ ‘ಕೋರೆಗಾಂವ್ ಕದನ’

ಆಲೂರು ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಆಯೋಜಿಸಿದ್ದ ಭೀಮ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು. ಬಿ.ಗೋಪಾಲ್ , ಎಚ್.ಕೆ. ಕುಮಾರಸ್ವಾಮಿ, ಮುರಳಿ ಮೋಹನ್, ಕೆ.ಎಸ್. ಮಂಜೇಗೌಡ ಇತರರಿದ್ದರು.
ಆಲೂರು ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಆಯೋಜಿಸಿದ್ದ ಭೀಮ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು. ಬಿ.ಗೋಪಾಲ್ , ಎಚ್.ಕೆ. ಕುಮಾರಸ್ವಾಮಿ, ಮುರಳಿ ಮೋಹನ್, ಕೆ.ಎಸ್. ಮಂಜೇಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾನವ ಪರಿವರ್ತನಾ ಸಮಾಜದ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಅಭಿಮತ
  • ದಲಿತಪರ ಸಂಘಟನೆಗಳ ಒಕ್ಕೂಟದ ಸಹಯೋಗ
ಆಲೂರು : ಭಾರತ ದೇಶದ ಇತಿಹಾಸದಲ್ಲಿ ಭೀಮ ಕೋರೆಂಗಾವ್ ಒಂದು ವಿಶಿಷ್ಟ ಯುದ್ಧವಾಗಿದ್ದು, ಅಂದಿನ ಕಾಲದ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ವಿರುದ್ಧದ ವಿಜಯ ಹಾಗೂ ಸಮಾನತೆಗಾಗಿ ನಡೆದಂತಹ ಯುದ್ಧವಾಗಿ ಪರಿಗಣಿಸಲ್ಪಟ್ಟಿದೆ ಎಂದು ಮಾನವ ಪರಿವರ್ತನಾ ಸಮಾಜದ ರಾಜ್ಯಾಧ್ಯಕ್ಷ ಬಿ.ಗೋಪಾಲ್ ತಿಳಿಸಿದರು.
ಆಲೂರು ಪಟ್ಟಣದ ತಾಲೂಕು ಮಿನಿ ವಿಧಾನಸೌಧ ಆವರಣದಲ್ಲಿ ಭೀಮ ಕೋರೆಂಗಾವ್ ವಿಜಯೋತ್ಸವ ಆಚರಣಾ ಸಮಿತಿ ಮತ್ತು ದಲಿತಪರ ಸಂಘಟನೆಗಳ ಒಕ್ಕೂಟ ಆಲೂರು ಇವರ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಭೀಮ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಭೀಮ ಕೋರೆಗಾಂವ್ ಎನ್ನುವುದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಒಂದು ಸಣ್ಣ ಗ್ರಾಮ. ಇದು ಭಾರತದ ಇತಿಹಾಸದಲ್ಲಿ, ವಿಶೇಷವಾಗಿ ದಲಿತ ಸಮುದಾಯದ ಆತ್ಮಗೌರವ ಮತ್ತು ಹೋರಾಟದ ಸಂಕೇತವಾಗಿ ಬಹಳ ಮುಖ್ಯವಾದ ಸ್ಥಾನವನ್ನು ಹೊಂದಿದೆ. 1 ಜನವರಿ 1818 ರಂದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಮರಾಠ ಸಾಮ್ರಾಜ್ಯದ ಪೇಶ್ವೆ ಸೈನ್ಯದ ನಡುವೆ ಯುದ್ಧ ನಡೆಯಿತು. ಈ ಯುದ್ಧವೇ ’ಕೋರೆಗಾಂವ್ ಕದನ’ವಾಗಿದೆ. ಬ್ರಿಟೀಷ್ ಸೈನ್ಯದಲ್ಲಿ ಸುಮಾರು 800 ಸೈನಿಕರಿದ್ದರು, ಅದರಲ್ಲಿ ಹೆಚ್ಚಿನವರು ದಲಿತ ಮಹರ್ ಸಮುದಾಯಕ್ಕೆ ಸೇರಿದವರಾಗಿದ್ದು ಪೇಶ್ವೆ ಎರಡನೇ ಬಾಜಿರಾಯನ ಸೈನ್ಯದಲ್ಲಿ ಸುಮಾರು 28,000 ಸೈನಿಕರಿದ್ದರು. ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸಹ, ಮಹರ್ ಸೈನಿಕರು ಅದ್ಭುತ ಶೌರ್ಯದಿಂದ ಹೋರಾಡಿ ಪೇಶ್ವೆ ಸೈನ್ಯವನ್ನು ಹಿಮ್ಮೆಟ್ಟಿಸಿದರು. ಜತೆಗೆ ಪೇಶ್ವೆ ಆಡಳಿತದಲ್ಲಿ ಅಸ್ಪಶ್ಯರು ಸಾಮಾಜಿಕ ಶೋಷಣೆಯನ್ನು ಅನುಭವಿಸುತ್ತಿದ್ದರು, ಹಾಗಾಗಿ ಈ ಗೆಲುವು ಅವರಲ್ಲಿ ಆತ್ಮಗೌರವವನ್ನು ತುಂಬಿತು. ಯುದ್ಧದಲ್ಲಿ ಮಡಿದ ಸೈನಿಕರ ಸ್ಮರಣಾರ್ಥವಾಗಿ ಬ್ರಿಟಿಷರು ಅಲ್ಲಿ ಒಂದು ’ವಿಜಯ ಸ್ತಂಭ’ವನ್ನು ನಿರ್ಮಿಸಿದರು. ಈ ಸ್ತಂಭದ ಮೇಲೆ ಮಡಿದ ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಲಾಗಿದೆ ಎಂದು ಮಾಹಿತಿ ನೀಡಿದರು.
ಜನವರಿ 1, 1927 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಭೀಮ ಕೋರೆಗಾಂವ್‌ಗೆ ಭೇಟಿ ನೀಡಿದರು. ಅವರು ಈ ಸ್ಥಳವನ್ನು ಶೋಷಿತರ ಶೌರ್ಯದ ಸಂಕೇತವೆಂದು ಬಣ್ಣಿಸಿದರು. ಅಂದಿನಿಂದ ಪ್ರತಿ ವರ್ಷ ಜನವರಿ 1ರಂದು ಲಕ್ಷಾಂತರ ಜನರು ಈ ಸ್ಥಳಕ್ಕೆ ಭೇಟಿ ನೀಡಿ ಗೌರವ ಸಲ್ಲಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಈ ಸ್ಥಳದಲ್ಲಿ ಸಂಘರ್ಷಗಳು ನಡೆದ ಕಾರಣ ಇದು ಸುದ್ದಿಯಲ್ಲಿತ್ತು. ಆದರೆ ಮೂಲಭೂತವಾಗಿ ಇದು ಸಾಮಾಜಿಕ ನ್ಯಾಯ ಮತ್ತು ಶೌರ್ಯದ ಪ್ರತೀಕವಾಗಿದೆ ಎಂದರು. 
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಬ್ರಿಟಿಷರು ನಿರ್ಮಿಸಿದ ’ವಿಜಯ ಸ್ತಂಭ’ದ ಮೇಲಿದ್ದ ಮಹರ್ ಸೈನಿಕರ ಹೆಸರುಗಳನ್ನು ಅಂಬೇಡ್ಕರ್ ಅವರು ಗಮನಿಸಿದರು. ಅಲ್ಲಿಯವರೆಗೆ ಅಜ್ಞಾತವಾಗಿದ್ದ ಅಥವಾ ಮರೆತುಹೋಗಿದ್ದ ಈ ಶೌರ್ಯದ ಇತಿಹಾಸವನ್ನು ಅವರು ಜಗತ್ತಿಗೆ ಪರಿಚಯಿಸಿದರು. ಈ ಯುದ್ಧವು ಕೇವಲ ಬ್ರಿಟೀಷರ ವಿರುದ್ಧದ ಗೆಲುವಲ್ಲ, ಬದಲಿಗೆ ಅಸ್ಪೃಶ್ಯತೆಯ ವಿರುದ್ಧದ ಗೆಲುವು ಎಂದರು. 
ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ ಭೀಮ ಕೋರೆಗಾಂವ್ ಎನ್ನುವುದು ಅಸ್ಪೃಶ್ಯರ ವಿಮೋಚನೆಯ ಇತಿಹಾಸದ ಮೊದಲ ಪುಟವಾಗಿದೆ. ಪೇಶ್ವೆ ಆಡಳಿತದ ಅವಧಿಯಲ್ಲಿ ದಲಿತರು ಅನುಭವಿಸಿದ ಅತ್ಯಂತ ಕಠಿಣ ಮತ್ತು ಅಮಾನವೀಯ ಪದ್ಧತಿಗಳನ್ನು ವಿರೋಧಿಸಲು ಈ ಗೆಲುವು ಒಂದು ಪ್ರೇರಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಜಿಲ್ಲಾ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್ ಮಂಜೇಗೌಡ, ಕೋರೆಂಗಾವ್ ವಿಜಯೋತ್ಸವ ಆಚರಣ ಸಮಿತಿ ಅಧ್ಯಕ್ಷ ಗೇಕರವಳ್ಳಿ ಬಸವರಾಜು, ಮಾಜಿ ಜಿ.ಪಂ ಸದಸ್ಯ ಸಣ್ಣಸ್ವಾಮಿ, ಜಿಲ್ಲಾ ದಲಿತ ಮುಖಂಡ ಸಂದೇಶ್ ಸೇರಿದಂತೆ ಆಲೂರು ತಾಲೂಕಿನ ದಲಿತಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರುಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net