ಅರಕಲಗೂಡು: ತಾಲೂಕಿನ ಸಿದ್ಧಾಪುರ ಗೇಟ್ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜ ಕೋಟೆಕಾರ್ (49) ಮೃತಪಟ್ಟಿದ್ದು, ಸಾವಿಗೆ ಅನುಮಾನ ವ್ಯಕ್ತಪಡಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ.
ಕುಂದಾಪುರ ಸಮೀಪದ ಕೋಟೇಕಾರು ಗ್ರಾಮದವರಾದ ನಾಗರಾಜ ಕೋಟೆಕಾರ್ ಕೊಣನೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ವಾಸವಿದ್ದರು. ಶನಿವಾರ ಶಾಲೆಯಿಂದ ಬಂದ ನಂತರ ಯಾರಿಗೂ ಸಿಕ್ಕಿಲ್ಲ. ಸೋಮವಾರ ಬೆಳಗ್ಗೆ ಶಾಲೆಗೆ ಮುಖ್ಯ ಶಿಕ್ಷಕರು ಬಾರದ ಹಿನ್ನೆಲೆ ಶಿಕ್ಷಕರು ಮತ್ತು ಸಿಬ್ಬಂದಿ ಫೋನ್ ಕರೆ ಮಾಡಿದ್ದಾರೆ. ಫೋನ್ ಸ್ವೀಕರಿಸದ ಕಾರಣ ಅವರು ವಾಸವಿದ್ದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕೋಣೆಯಲ್ಲಿ ನೋಡಿದಾಗ ಮಂಚದಿಂದ ಕೆಳಗೆ ದೇಹ ಬಿದ್ದಿರುವುದು ಕಂಡುಬಂದಿದೆ.
ರಕ್ತಸ್ರಾವವಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿರುವುದರಿದ ಮೃತದೇಹವನ್ನು ಮರಣೊತ್ತರ ಪರೀಕ್ಷೆಗಾಗಿ ಹಾಸನದ ಆಸ್ಪತ್ರೆಗೆ ರವಾನಿಸಲಾಯಿತು. ಕೊಣನೂರು ಪೊಲೀಸರು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಮೃತರಿಗೆ ತಾಯಿ, ಇಬ್ಬರು ಸಹೋದರರು, ಸಹೋದರಿ ಇದ್ದಾರೆ.
ಹಂಡ್ರಂಗಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದ ಅವರು ಮೂರ‌್ನಾಲ್ಕು ವರ್ಷಗಳಿಂದ ಸಿದ್ದಾಪುರ ಗೇಟ್ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.