ಪೂರ್ವ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಕಲಿಸಿ

ಅರಕಲಗೂಡು ತಾಲೂಕಿನ ಶಣವಿನಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 60ನೇ ವಾರ್ಷಿಕೋತ್ಸವದಲ್ಲಿ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ಕೊಡುಗೆಯಾಗಿ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಕಾಂತರಾಜ್, ನಯಾಜ್ ಉಲ್ಲಾ, ರೌಷನ್ ಅರಾ, ಸಂತೋಷ್, ಮಂಜುನಾಥ್ ಇತರರಿದ್ದರು.
ಅರಕಲಗೂಡು ತಾಲೂಕಿನ ಶಣವಿನಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 60ನೇ ವಾರ್ಷಿಕೋತ್ಸವದಲ್ಲಿ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ಕೊಡುಗೆಯಾಗಿ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಕಾಂತರಾಜ್, ನಯಾಜ್ ಉಲ್ಲಾ, ರೌಷನ್ ಅರಾ, ಸಂತೋಷ್, ಮಂಜುನಾಥ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ದಿವಾಕರಗೌಡ ಮನವಿ
ಅರಕಲಗೂಡು : ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೂರ್ವ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಕಲಿಸುವುದು ಅತ್ಯವಶ್ಯಕ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ದಿವಾಕರಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 60ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಅಲ್ಲದೆ ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಹೆಚ್ಚಿನ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಕಾನ್ವೆಂಟ್‌ಗಳಿಗೆ ಸೇರಿಸುತ್ತಿದ್ದಾರೆ. ಆದ್ದರಿಂದ ನಗರದ ಪ್ರದೇಶದ ಮಕ್ಕಳಿಗೆ ಸರಿಸಾಟಿಯಾಗಿ ನಿಲ್ಲಬೇಕಾದರೆ ಗ್ರಾಮೀಣ ಭಾಗದ ಮಕ್ಕಳಿಗೂ ಇಂಗ್ಲಿಷ್ ಕಲಿಕೆ ಅನಿವಾರ್ಯವಾಗಿದೆ. ಎಲ್‌ಕೆಜಿ, ಯುಕೆಜಿಯಿಂದಲೇ ಇಂಗ್ಲಿಷ್ ಕಲಿಕೆ ಆರಂಭಿಸಿದರೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಿಕೊಳ್ಳಲೂ ಸಾಧ್ಯವಾಗಲಿದೆ. ಮುಖ್ಯವಾಗಿ ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಅವರ ಉನ್ನತ ಸಾಧನೆಗೆ ಅಡಿಪಾಯ ಹಾಕಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಸದಸ್ಯ ಸಂತೋಷ್ ಮಾತನಾಡಿ, ಮೂರು ವರ್ಷಗಳ ಹಿಂದೆ ಶಾಲೆಯಲ್ಲಿ ಒಬ್ಬರೂ ಶಿಕ್ಷಕರಿರಲಿಲ್ಲ.್ಷ ಅಂದು ಒಬ್ಬರೇ ಅತಿಥಿ ಶಿಕ್ಷಕಿ 84 ಮಕ್ಕಳಿಗೆ ತರಗತಿ ತೆಗೆದುಕೊಂಡು ಶಾಲೆ ಉಳಿಸಿದ್ದಾರೆ. ನಂತರ ಶಿಕ್ಷಕಿಯಾಗಿ ನೇಮಕಗೊಂಡಿದ್ದ ರೌಷನ್ ಅರ ಅವರು ಇಂಗ್ಲಿಷ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಮಕ್ಕಳಿಗೆ ನೆರವಾಗಿದ್ದರು. ಕಳೆದ ವರ್ಷ ಅವರ ವರ್ಗಾವಣೆ ನಂತರ ಈಗ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರ ನೇಮಕವಾಗಿಲ್ಲ. ಕೊಠಡಿಗಳ ಕೊರತೆ ಉಂಟಾಗಿದೆ. ಕುಡಿಯುವ ನೀರಿಗೆ ತೊಂದರೆ ಇದೆ. ಗ್ರಾಮೀಣ ಭಾಗದ ಶಾಲೆಗಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಿ ಸರ್ಕಾರಿ ಶಾಲೆಗಳನ್ನು ಉಳಿಸಲು ಒತ್ತು ನೀಡಬೇಕು ಎಂದು ವಿನಂತಿಸಿದರು.
ಇಸಿಒ ಕಾಂತರಾಜ್ ಮಾತನಾಡಿ, ಶಣವಿನಕುಪ್ಪೆ ಶಾಲೆ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು ಮಕ್ಕಳ ಹಾಜರಾತಿಯಲ್ಲಿ ಹಿಂದೆ ಬಿದ್ದಿಲ್ಲ. ಶಾಲೆಗೆ ಇಂಗ್ಲಿಷ್ ಶಿಕ್ಷಕರೊಂದಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸುವಾಗಿ ಭರವಸೆ ನೀಡಿದರು.
ಸಿಆರ್‌ಟಿ ನಯಾಜ ಉಲ್ಲಾ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಮಹೇಶ್, ಮುಖ್ಯ ಶಿಕ್ಷಕಿ ಯಾಸ್ಮಿನ್ ತಾಜ್, ಸಹ ಶಿಕ್ಷಕರಾದ ಎಚ್.ಎನ್. ಪರಮೇಶ್, ಎಸ್.ವಿ. ದಿವ್ಯಾ, ಎಂ.ಎಲ್. ಸಾಗರ್, ರೌಷನ್ ಅರಾ, ಅಂಗನವಾಡಿ ಶಿಕ್ಷಕಿ ಮಂಜುಳಾ, ರಾಧಾ, ಹೊನ್ನವಳ್ಳಿ ಹೇಮಾವತಿ ಪ್ರೌಢಶಾಲೆ ಶಿಕ್ಷಕರಾದ ಸಂಜೀವ್ ಕುಮಾರ್, ರಾಘವೇಂದ್ರ ಮತ್ತು ಗ್ರಾಮಸ್ಥರು ಇದ್ದರು. ಶಾಲಾ ಮಕ್ಕಳಿಗೆ ತಟ್ಟೆ ಲೋಟಗಳನ್ನು ಕೊಡುಗೆಯಾಗಿ ನೀಡಿದ ದಾನಿ ಮಾದೇಶ್, ಕಂಪ್ಯೂಟರ್ ನೀಡಿದ ಸುನಿಲ್, ಪುನೀತ್, ಡ್ರಮ್‌ಸೆಟ್ ನೀಡಿದ ಮಂಜುನಾಥ್, ಸಿಂಟೆಕ್ಸ್ ದಾನಿ ಪ್ರಶಾಂತ್ ಅವರನ್ನು ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net