ಚನ್ನರಾಯಪಟ್ಟಣ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ಸಭೆ ನಡೆಯಿತು. ಜಿ.ಆರ್.ಹರೀಶ್, ಶಿರಸ್ತೇದಾರ್ ಪವನ್, ಗಿರೀಶ್, ತ್ಯಾಗರಾಜ್, ಕೆ.ಎನ್.ಅನಿಲ್, ಉಮಾಶಂಕರ್ ಇತರರು ಇದ್ದರು.
ಚನ್ನರಾಯಪಟ್ಟಣ: ತಾಲೂಕಿನಾದ್ಯಂತ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸುವಂತೆ ಶಾಸಕ ಸಿ.ಎನ್.ಬಾಲಕೃಷ್ಣ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕುಡಿಯುವ ನೀರಿನ ಸಮಸ್ಯೆ ಕುರಿತು ನಡೆದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಬೇಸಿಗೆ ಆರಂಭಗೊಂಡಿದ್ದು, ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಈಗಿನಿಂದಲೇ ಪರಿಶೀಲನೆ ನಡೆಸಿ ಬೋರ್ವೆಲ್‌ಗಳ ದುರಸ್ತಿ, ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಹಾಗೂ ತೀರ ಸಮಸ್ಯೆ ಉಂಟಾಗುವಂತಹ ಸ್ಥಳಗಳಿಗೆ ಟ್ಯಾಂಕರ್ ಮೂಲಕವೂ ನೀರು ಸರಬರಾಜು ಮಾಡಲು ಎಲ್ಲ ರೀತಿಯ ಕ್ರಮ ವಹಿಸುವಂತೆ ತಿಳಿಸಿದರು.
ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗುವುದು ಸಾಮಾನ್ಯ. ಸಮಸ್ಯೆ ಗುರುತಿಸಿ ಪರಿಹಾರ ಕಲ್ಪಿಸುವುದು ಆಯಾ ಗ್ರಾಮ ಪಂಚಾಯಿತಿ ಪಿಡಿಒಗಳ ಜವಾಬ್ದಾರಿ. ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಅಧಿಕಾರಿಗಳು ಈ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಕುಡಿಯುವ ನೀರಿನ ವಿಷಯದಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಹರೀಶ್ ಮಾತನಾಡಿ, ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕುರಿತು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ 10 ಗ್ರಾಮಗಳಲ್ಲಿ ಸಮಸ್ಯೆಯಾಗಿದ್ದು, ನೀರಿನ ಟ್ಯಾಂಕರ್ ಹಾಗೂ ರೈತರ ಜಮೀನಿನ ಖಾಸಗಿ ಬೋರ್ವೆಲ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಸಭೆಯಲ್ಲಿ ಶಿರಸ್ತೇದಾರ್ ಪವನ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಗಿರೀಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ತ್ಯಾಗರಾಜ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಎನ್.ಅನಿಲ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಉಮಾಶಂಕರ್ ಇತರರು ಇದ್ದರು.