ಕಾರ್ಮಿಕರ ಸುರಕ್ಷತೆಗೆ ಕ್ರಮಕೈಗೊಳ್ಳಿರಿ

ಯಾವುದೇ ಮುಂಜಾಗ್ರತೆ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳದೆ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ರಾಜ ಗೋಪುರದ ಸ್ವಚ್ಛತೆಯಲ್ಲಿ ತೊಡಗಿರುವ ಕಾರ್ಮಿಕರು.
ಯಾವುದೇ ಮುಂಜಾಗ್ರತೆ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳದೆ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ರಾಜ ಗೋಪುರದ ಸ್ವಚ್ಛತೆಯಲ್ಲಿ ತೊಡಗಿರುವ ಕಾರ್ಮಿಕರು.
Published on

ಪ್ರಮುಖ ಮುಖ್ಯಾಂಶಗಳು

  • worker safety
ಬೇಲೂರು: ವಿಶ್ವ ವಿಖ್ಯಾತ ಶ್ರೀಚನ್ನಕೇಶವಸ್ವಾಮಿ ದೇವಸ್ಥಾನದ ಕಳಸ ಪ್ರಾಯವಾಗಿರುವ ರಾಜ ಗೋಪುರದ ಸ್ವಚ್ಛತೆಯಲ್ಲಿ ತೊಡಗಿರುವ ಕಾರ್ಮಿಕರು ಯಾವುದೇ ಮುಂಜಾಗ್ರತೆ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳದೆ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಶ್ರೀಚನ್ನಕೇಶವಸ್ವಾಮಿ ದೇಗುಲದ ಮುಂಭಾಗದಲ್ಲಿರುವ ವಿಜಯ ನಗರದ ಅರಸರು ನಿರ್ಮಿಸಿ ಕೊಟ್ಟ ರಾಜ ಗೋಪುರದಲ್ಲಿ ಚಿಕ್ಕಪುಟ್ಟ ಗಿಡ ಗಂಟಿಗಳು ಬೆಳೆದಿರುವುದನ್ನು ಸ್ವಚ್ಛಗೊಳಿಸಲು ಕಾರ್ಮಿಕರು ಎತ್ತರದ ಗೋಪುರದ ಮೇಲೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಸ್ವಚ್ಛತೆಯಲ್ಲಿ ತೊಡಗಿರುವುದು ಚರ್ಚೆಗೆ ಗ್ರಾಸವಾಗಿದೆ. ಕೆಲಸ ಮಾಡಿಸುತ್ತಿರುವ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡದೆ ಕೆಲಸ ಮಾಡಿಸುತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇದು ಹಿಡಿದ ಕೈಗನ್ನಡಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಕಟ್ಟಡ ಕಾಮಗಾರಿ ಹಾಗೂ ಎತ್ತರ ಪ್ರದೇಶಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸುರಕ್ಷತಾ ಕ್ರಮ ಕಡ್ಡಾಯವಾಗಿದ್ದರೂ, ಇಲ್ಲಿ ನಿರ್ಲಕ್ಷಿಸಲಾಗಿದೆ. ಇನ್ನಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಾರ್ಮಿಕರಿಗೆ ಸುರಕ್ಷತಾ ಪರಿಕರಗಳನ್ನು ಕೊಡಲಿ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.
ದೇಗುಲದ ಗೋಪುರದ ಸ್ವಚ್ಛತಾ ಕೆಲಸ ಅಗತ್ಯವಾಗಿದ್ದರೂ ಕಾರ್ಮಿಕರ ಜೀವದ ಜತೆ ಚೆಲ್ಲಾಟವಾಡಬಾರದು. ಕೆಲಸಕ್ಕೂ ಮುನ್ನ ಮುಂಜಾಗ್ರತೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕೆಲಸ ಮಾಡಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಇಲ್ಲಿ ಅಧಿಕಾರಿಗಳು ಮತ್ತು ಕಾರ್ಮಿಕರು ನಿರ್ಲಕ್ಷ್ಯ ವಹಿಸುವುದರಿಂದ ಏನಾದರೂ ಅಪಾಯವಾದರೆ ಯಾರು ಹೊಣೆ? ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಕಾರ್ಮಿಕರಿಗೆ ಸುರಕ್ಷತಾ ಪರಿಕರಗಳೊಂದಿಗೆ ಕೆಲಸ ಮಾಡಿಸಲು ಮುಂದಾಗಬೇಕು.
ಎಸ್.ಕೆ.ನಾಗೇಶ್, ನಿರ್ದೇಶಕ ಅರ್ಬನ್ ಬ್ಯಾಂಕ್ ಬೇಲೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net