ಜಾನುವಾರುಗಳ ಸಂಶಯಾಸ್ಪದ ಸಾವು

 ಮುನ್ನೆಚ್ಚರಿಕೆ ಕ್ರಮವಾಗಿ ಕುಡುಕುಂದಿ ಗ್ರಾಮದಲ್ಲಿ ಜಾನುವಾರುಗಳಿಗೆ ಚಪ್ಪೆ ರೋಗದ ಮದ್ದು ನೀಡುತ್ತಿರುವ ಪಶು ವೈದ್ಯರ ತಂಡ.
ಮುನ್ನೆಚ್ಚರಿಕೆ ಕ್ರಮವಾಗಿ ಕುಡುಕುಂದಿ ಗ್ರಾಮದಲ್ಲಿ ಜಾನುವಾರುಗಳಿಗೆ ಚಪ್ಪೆ ರೋಗದ ಮದ್ದು ನೀಡುತ್ತಿರುವ ಪಶು ವೈದ್ಯರ ತಂಡ.
Published on

ಪ್ರಮುಖ ಮುಖ್ಯಾಂಶಗಳು

  • ರೋಗದ ಲಕ್ಷಣ ತಿಳಿಯದೇ ರೈತರಲ್ಲಿ ಆತಂಕ
  • ಪಶು ವೈದ್ಯಾಧಿಕಾರಿಗಳ ತಂಡದಿಂದ ಪರಿಶೀಲನೆ

ಗಂಡಸಿ: ಹೋಬಳಿಯ ಲಾಳನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಜೇನಹಳ್ಳಿ ಹಾಗೂ ಅಕ್ಕ ಪಕ್ಕದ ಗ್ರಾಮಗಳಲ್ಲಿ ಒಂದೇ ವಾರದಲ್ಲಿ 15ಕ್ಕೂ ಅಧಿಕ ಜಾನುವಾರುಗಳು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಸಾವಿಗೆ ನಿಖರವಾದ ರೋಗ ಲಕ್ಷಣದ ಕಾರಣ ತಿಳಿಯದೆ ರೈತ ಕುಟುಂಬಗಳಲ್ಲಿ ಆತಂಕ ಮನೆಮಾಡಿದೆ.

ಜಾನುವಾರುಗಳ ಸರಣಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹಾಸನ ಪಶು ಮಹಾವಿದ್ಯಾಲಯದ ಡಾ. ಗಿರೀಶ್, ಡಾ. ರವಿಕುಮಾರ್, ಡಾ. ನಾಗಪ್ಪ ಮತ್ತು ಪಶು ವೈದ್ಯರುಗಳ ತಂಡ ಹಾಗೂ ಗಂಡಸಿ ಪಶು ವೈದ್ಯಾಧಿಕಾರಿ ಕಿಶೋರ್ ಕುಮಾರ್ ಸೋಮವಾರ ಳಗ್ಗೆ ಮಂಜೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ರೋಗದ ಲಕ್ಷಣಗಳಿಂದ ಬಳಲುತ್ತಿದ್ದ ಜಾನುವಾರುಗಳ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಪ್ರಯೋಗಾಲಯದ ವರದಿ ಗುರುವಾರದ ವೇಳೆಗೆ ಪಶು ವೈದ್ಯರ ಕೈ ಸೇರಲಿದ್ದು, ಜಾನುವಾರುಗಳ ಸರಣಿ ಸಾವಿನ ರೋಗ ಲಕ್ಷಣಗಳ ಬಗ್ಗೆ ನಿಖರವಾದ ಮಾಹಿತಿ ತಿಳಿಯಲಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೇಲ್ನೋಟಕ್ಕೆ ಜಾನುವಾರುಗಳಲ್ಲಿ ಚಪ್ಪೇ ರೋಗದ ಲಕ್ಷಣಗಳು ಗೋಚರಿಸುತ್ತಿದ್ದು ತಕ್ಷಣಕ್ಕೆ ಪಶು ವೈದ್ಯರ ತಂಡ ಪರೀಕ್ಷಾ ವರದಿ ಬರುವ ಮುನ್ನವೇ ಮಂಜೇನಹಳ್ಳಿ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯ ಗ್ರಾಮಗಳ ಜಾನುವಾರುಗಳಿಗೆ ಚಪ್ಪೇ ರೋಗದ ಮದ್ದು ನೀಡಲು ತೀರ್ಮಾನಿಸಿದು,್ದ ಸೋಮವಾರ ಮತ್ತು ಮಂಗಳವಾರ 2500 ರಾಸುಗಳಿಗೆ ಚಪ್ಪೇ ರೋಗದ ಮದ್ದು ನೀಡಲಾಗಿದೆ.
ಜಾನುವಾರುಗಳಲ್ಲಿ ಚೇತರಿಕೆ ಲಕ್ಷಣಗಳು ಕಾಣುತ್ತಿದ್ದು ರೈತರು ಆತಂಕ ಪಡಬೇಕಾಗಿಲ್ಲ ಎಂದು ಗಂಡಸಿ ವೃತ್ತದ ಪಶುವೈದ್ಯ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net