

ಪ್ರಮುಖ ಮುಖ್ಯಾಂಶಗಳು
ಹಳೇಬೀಡು:
ಎನ್‌ಸಿಆರ್ ಇತ್ಯರ್ಥ ಪಡಿಸಲು ವ್ಯಕ್ತಿಯೊಬ್ಬರಿಂದ ಇಪ್ಪತ್ತು ಸಾವಿರ ರೂ. ಲಂಚ ಪಡೆಯುತ್ತಿದ್ದ ಹಳೇಬೀಡು ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಮಂಜುನಾಥ್ ಗುರುವಾರ ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಘಟ್ಟದಹಳ್ಳಿ ಗ್ರಾಪಂ ವ್ಯಾಪ್ತಿಯ ಹುಲ್ಲೇಕಲ್ಲಳ್ಳಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನವೀನ್ ಹಾಗೂ ಸಂತೋಷ್ ಎಂಬವರ ವಿರುದ್ಧ ಕೆಲ ಗ್ರಾಮಸ್ಥರು ಮೌಖಿಕ ದೂರು ನೀಡಿದ್ದನ್ನು ಪರಿಶೀಲಿಸಲು ಬುಧವಾರ ಸ್ಥಳಕ್ಕೆ ಹೋಗಿದ್ದ ಪಿಎಸ್‌ಐ ಮಂಜುನಾಥ್, ಅಕ್ರಮ ಕಂಡು ಬಂದಲ್ಲಿ ಇಬ್ಬರ ವಿರುದ್ದವೂ ಕೇಸ್ ದಾಖಲಿಸುವುದಾಗಿ ಹೇಳಿದ್ದರು. ಮಾತು ವಾಗ್ವಾದಕ್ಕೆ ತಿರುಗಿ ಅವಾಚ್ಯ ಶಬ್ದಗಳಿಂದ ತನ್ನನ್ನು ನಿಂದಿಸಿದ್ದಾರೆ ಎಂದು ಸ್ವತಃ ಪಿಎಸ್‌ಐ , ನವೀನ್ ಹಾಗೂ ಸಂತೋಷ್ ವಿರುದ್ದ ಎನ್‌ಸಿಆರ್ ದಾಖಲಿಸಿದ್ದರು. ಕೋರ್ಟ್ ಮೂಲಕ ಎಫ್‌ಐಆರ್ ದಾಖಲಿಸಿವುದಾಗಿಯೂ ಹೇಳಿದ್ದರು. ಗುರುವಾರ ಬೆಳಗ್ಗೆ ಈ ಸಂಬಂಧ ರಾಜಿಗೆಂದು ಬಂದಿದ್ದ ಸಂತೋಷ್ ಬಳಿ 1 ಲಕ್ಷ ರೂ. ಲಂಚಕ್ಕೆ ಮಂಜುನಾಥ್ ಬೇಡಿಕೆ ಇಟ್ಟಿದ್ದರು. ಬಳಿಕ ಇಪ್ಪತ್ತು ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.