ವಾಹನ ಸಂಚಾರ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

 ಹೊಳೆನರಸೀಪುರ ಸೂರನಹಳ್ಳಿ ಮೂಲಕ ಚನ್ನರಾಯಪಟ್ಟಣಕ್ಕೆ ಹಾದು ಹೋಗುವ ತಟ್ಟೆಕೆರೆ ಸಮೀಪದ ಆದರ್ಶ ಶಾಲೆಯ ವಿದ್ಯಾರ್ಥಿಗಳು, ಪಾಲಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಹೊಳೆನರಸೀಪುರ ಸೂರನಹಳ್ಳಿ ಮೂಲಕ ಚನ್ನರಾಯಪಟ್ಟಣಕ್ಕೆ ಹಾದು ಹೋಗುವ ತಟ್ಟೆಕೆರೆ ಸಮೀಪದ ಆದರ್ಶ ಶಾಲೆಯ ವಿದ್ಯಾರ್ಥಿಗಳು, ಪಾಲಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸೂರನಹಳ್ಳಿ- ಚನ್ನರಾಯಪಟ್ಟಣ ರಸ್ತೆ ದುರಸ್ತಿಗೆ ಆಗ್ರಹ
ಹೊಳೆನರಸೀಪುರ: ಪಟ್ಟಣದಿಂದ ಸೂರನಹಳ್ಳಿ ಮೂಲಕ ಚನ್ನರಾಯಪಟ್ಟಣಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿಗೊಳಿಸುವಂತೆ ಒತ್ತಾಯಿಸಿ ಸರ್ಕಾರಿ ಪಾಲಿಟೆಕ್ನಿಕ್, ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಶುಕ್ರವಾರ ತಟ್ಟೆಕೆರೆ ಗ್ರಾಮದ ಸಮೀಪದ ಆದರ್ಶ ಶಾಲೆ ಮುಂದೆ ವಾಹನ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಆದರ್ಶ ವಿದ್ಯಾಲಯದ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಿರೀಶ್ ಮಾತನಾಡಿ, ಈ ಆದರ್ಶ ಶಾಲೆಯಲ್ಲಿ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ನಿತ್ಯ ಸಂಚರಿಸಲು ಆಗದಷ್ಟು ರಸ್ತೆ ಹದಗೆಟ್ಟು ಹೋಗಿದೆ.
ಈ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಕೈ,ಕಾಲು ಮುರಿತಕ್ಕೊಳಗಾಗುವ ಪರಿಸ್ಥಿತಿ ಇದೆ. ಈ ರಸ್ತೆ ದುರಸ್ತಿ ಮಾಡಲು ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ. ಕಂಡು ಕಾಣದಂತೆ ಇರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಆನಂದ್ ಮಾತನಾಡಿ, ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ಪತ್ರ ಬರೆದು ರಸ್ತೆ ದುರಸ್ತಿಗೊಳಿಸುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಬೇರೆ ಕಾಣದೆ ನಾವು ಪ್ರತಿಭಟನೆ ನಡೆಸಿದ್ದೇವೆ ಎಂದರು.
ಪಾಲಕಿ ಕುಸುಮಾ ಕುಮಾರಿ ಮಾತನಾಡಿ, ನಮಗೆ ನ್ಯಾಯ ದೊರಕದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಿಂದ ಸಂಚಾರದಲ್ಲಿ ಅಸ್ತವ್ಯಸ್ತವಾಯಿತು. ಗಂಟೆಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಿಷಯ ತಿಳಿದ ತಾಲೂಕು ತಹಸೀಲ್ದಾರ್ ರೇಣುಕುಮಾರ್ ತಮ್ಮ ಸಿಬ್ಬಂದಿಯನ್ನು ಕಳುಹಿಸಿ ಪ್ರತಿಭಟನಾನಿರತರ ಮನವಿ
ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಎರಡು ಶಾಲೆಯ ನೂರಾರು ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net