ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಕೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಪರೀಕ್ಷಾ ಕೆಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಗುಲಾಬಿ ಹೂ ಹಾಗೂ ಪೆನ್ನು ನೀಡಿ ಶುಭ ಕೋರಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಪರೀಕ್ಷಾ ಕೆಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಗುಲಾಬಿ ಹೂ ಹಾಗೂ ಪೆನ್ನು ನೀಡಿ ಶುಭ ಕೋರಿದರು.
Published on
ಬೇಲೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಪಟ್ಟಣದ ಪೂರ್ಣಪ್ರಜ್ಞಾ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ ವಿವಿಧ ಶಾಲಾ ವಿದ್ಯಾರ್ಥಿಗಳನ್ನು ತಾಲೂಕು ಆಡಳಿತದಿಂದ ಬುಧವಾರ ಗುಲಾಬಿ ಹೂ, ಪೆನ್ನುಗಳನ್ನು ನೀಡಿ ಶುಭ ಕೋರಲಾಯಿತು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಪರೀಕ್ಷೆಗಾಗಿ ವರ್ಷ ಪೂರ್ತಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮುನ್ನ ಶಾಂತ ಮನಸ್ಸಿನಿಂದ ಒಂದೆರಡು ನಿಮಿಷ ಕುಳಿತು ಕೊಳ್ಳಬೇಕು. ನಂತರ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯಲು ಪ್ರಾರಂಭಿಸುವುದು ಒಳ್ಳೆಯದು. ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು. ಯಾವುದೇ ಆತುರ ಮತ್ತು ಆತಂಕವಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ನೀವು ಕಲಿತಿರುವ ವಿಷಯಗಳನ್ನು ಏಕಾಗ್ರತೆಯಿಂದ ಬರೆಯುವುದರಿಂದ ಉತ್ತಮ ಫಲಿತಾಂಶ ಸಾಧಿಸಬಹುದು. ಉತ್ತಮವಾಗಿ ಪರೀಕ್ಷೆ ಬರೆದು ಹೆಚ್ಚು ಅಂಕಗಳೊಂದಿಗೆ ಕೀರ್ತಿ ತರುವಂತಾಗಬೇಕು. ವಿದ್ಯಾರ್ಥಿಗಳನ್ನು ಉತ್ತಮವಾಗಿ ಪರೀಕ್ಷೆ ಬರೆಯುವ ಹಂತಕ್ಕೆ ತಂದ ಎಲ್ಲ ಶಿಕ್ಷಕರಿಗೂ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅಭಿನಂದಿಸುತ್ತೇನೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಮಾತನಾಡಿ, ವಿದ್ಯಾರ್ಥಿಗಳು ಪಾಲಕರು, ಶಾಲೆ ಮತ್ತು ತಾಲೂಕಿಗೆ ಕೀರ್ತಿ ತರುವಂತಾಗಬೇಕು. ಬೇಲೂರು ತಾಲೂಕಿನಲ್ಲಿ 2,042 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದು, ಏಳು ಕೇಂದ್ರಗಳಲ್ಲಿ ಪರೀಕ್ಷೆಗಳು ಸುಗಮವಾಗಿ ನಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಪ್ರಶ್ನೆ ಪತ್ರಿಕೆಗಳನ್ನು ಸುರಕ್ಷಿತವಾಗಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಸಮಯದ ಅರ್ಧ ಗಂಟೆಗೂ ಮೊದಲೇ ವಿದ್ಯಾರ್ಥಿಗಳು ಕೇಂದ್ರಗಳಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ. ತಾಲೂಕು ಆಡಳಿತ ಪೊಲೀಸ್, ಅರಣ್ಯ ಇಲಾಖೆ, ಕೆಎಸ್‌ಆರ್‌ಟಿಸಿ, ಸೆಸ್ಕ್, ಆರೋಗ್ಯ ಇಲಾಖೆ ಸಿಬ್ಬಂದಿ ಸಮನ್ವಯದೊಂದಿಗೆ ಯಾವುದೇ ಅಡಚಣೆ ಇಲ್ಲದೆ ಪರೀಕ್ಷೆ ಬರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾ ಕೆಡಿಪಿ ಸದಸ್ಯೆ ಸೌಮ್ಯಾ ಆನಂದ್, ತಾಪಂ ಇಒ ಸತೀಶ್, ಪೂರ್ಣಪ್ರಜ್ಞಾ ಶಾಲೆ ಪ್ರಾಂಶುಪಾಲ ಪ್ರಶಾಂತ್ ಕುಮಾರ್, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹೇಮಂತ್ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net