ಬೇಲೂರು ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ ಮಾತನಾಡಿದರು. ಮಂಜುನಾಥ್, ರಾಜು, ದಾಸಪ್ಪ, ಚಂದ್ರಶೇಖರ್, ಸ್ವಾಮಿ, ರವಿ, ಬಾಬು ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬೇಲೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರೇವಣ್ಣ ಎಚ್ಚರಿಕೆ
ಶಿವರಾತ್ರಿ, ರಂಜಾನ್ ಅಂಗವಾಗಿ ಶಾಂತಿ ಸಭೆ
ಬೇಲೂರು: ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಎಲ್ಲ ಧರ್ಮಿಯರು ಮುಂಬರುವ ಹಬ್ಬಗಳನ್ನು ಸೌಹಾರ್ದಯುತವಾಗಿ ಆಚರಿಸುವ ಮೂಲಕ ಶಾಂತಿ ಕಾಪಾಡಬೇಕು ಎಂದು ಬೇಲೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರೇವಣ್ಣ ಹೇಳಿದರು.
ಶಿವರಾತ್ರಿ ಹಾಗೂ ರಂಜಾನ್ ಹಬ್ಬದ ಅಂಗವಾಗಿ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಮುಂಬರುವ ಶಿವರಾತ್ರಿ ಹಾಗೂ ರಂಜಾನ್ ಹಬ್ಬದ ವೇಳೆ ಸಮಾಜದಲ್ಲಿ ಶಾಂತಿ ಕದಡುವಂತಹ ಯಾವುದೇ ಘಟನೆಗಳಿಗೂ ಅವಕಾಶವಾಗದಂತೆ ಎಲ್ಲ ಸಮುದಾಯದವರು ಎಚ್ಚರಿಕೆ ವಹಿಸಿ ಶಾಂತಿ ಕಾಪಾಡಬೇಕು. ಜತೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಪ್ರತಿಯೊಬ್ಬರೂ ಅವರವರ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಬೇಕು. ಮತ್ತು ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ದಾರಿ ತಪ್ಪದಂತೆ ಶಾಲಾ-ಕಾಲೇಜುಗಳಲ್ಲಿ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಹಾಗೂ ಗ್ರಾಪಂ ಪಿಡಿಒಗಳ ಸಹಯೋಗದೊಂದಿಗೆ ಹೋಬಳಿ ಮಟ್ಟದಲ್ಲಿಯೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಹಿರಿಯ ನಾಗರಿಕರ ರಕ್ಷಣೆಯ ದೃಷ್ಟಿಯಿಂದ ಮನೆ ಮನೆಗೆ ಪೊಲೀಸ್ ಅಭಿಯಾನದಡಿ ಪ್ರತಿಯೊಂದು ಮನೆಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮನೆಗೆ ಸ್ಟಿಕ್ಕರ್ ಅಂಟಿಸಲಾಗುವುದು. ವಿಶೇಷವಾಗಿ ಒಂಟಿಯಾಗಿ ವಾಸಿಸುವ ವಯೋವೃದ್ಧರನ್ನು ಗುರುತಿಸಿ ಆಸರೆ ಯೋಜನೆಯಡಿ ಅವರಿಗೆ ರಕ್ಷಣೆ ಹಾಗೂ ಧೈರ್ಯ ತುಂಬುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಲಿದೆ. ಶಾಲಾ-ಕಾಲೇಜುಗಳಿಗೆ ಹೋಗುವ ಮತ್ತು ಬಿಡುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಆಗುವ ಕಿರುಕುಳ ತಪ್ಪಿಸಲು ಎಚ್ಚರಿಕೆ ವಹಿಸಲಾಗಿದ್ದು, ಈ ಸಮಯದಲ್ಲಿ ಸಾರ್ವಜನಿಕರ, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಎಎಸ್‌ಐ ನೇತೃತ್ವದಲ್ಲಿ ಪೊಲೀಸರು ಗಸ್ತು ಮಾಡಲಿದ್ದಾರೆ. ಇದರೊಂದಿಗೆ ಇದೇ ತಿಂಗಳು 17 ರಂದು ನಡೆಯಲಿರುವ ದಲಿತ ಮುಖಂಡರ ಸಭೆಗೆ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ 5 ಜನರನ್ನು ಆಯ್ಕೆ ಮಾಡಿ ಕಳುಹಿಸುವಂತೆ ತಿಳಿಸಲಾಯಿತು. ಠಾಣಾ ವ್ಯಾಪ್ತಿಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಯಾವುದೇ ದೂರುಗಳಿಲ್ಲದಿದ್ದರೂ, ಸಮಸ್ಯೆಗಳು ಬಂದರೆ ತಕ್ಷಣ ಸ್ಪಂದಿಸುವುದಾಗಿ ತಿಳಿಸಿದರು.
ಪಿಎಸ್‌ಐ ಶಿವನಗೌಡ ಜಿ.ಪಾಟೀಲ್ ಮಾತನಾಡಿ, ದಲಿತ ಸಮುದಾಯದ ಕುಂದು ಕೊರತೆಗಳನ್ನು ಆಲಿಸಿ, ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವ ನಿಟ್ಟಿನಲ್ಲಿ ಇಲಾಖೆ ಸದಾ ಸಿದ್ಧವಿದೆ. ಅಲ್ಲದೆ ದಲಿತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ, ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತರುವ ಉದ್ದೇಶದಿಂದ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಮುಖಂಡರು ನೀಡಿದ ಉತ್ತಮ ಸಲಹೆ ಮತ್ತು ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ಅವರು ಸೂಚಿಸಿದ ಬದಲಾವಣೆಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು.
ಮಂಜುನಾಥ್, ರಾಜು, ದಾಸಪ್ಪ, ಚಂದ್ರಶೇಖರ್, ಸ್ವಾಮಿ, ರವಿ, ಬಾಬು ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.