ಹೊಳೆನರಸೀಪುರ ತಾಲೂಕಿನ ಕಡುವಿನ ಹೊಸಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಬೀದಿ ನಾಟಕಕ್ಕೆ ಚಾಲನೆ ನೀಡಲಾಯಿತು. ಪದ್ಮಮ್ಮ ಶ್ರೀನಿವಾಸ್, ಪಿ.ಯಶಸ್ವಿನಿ, ಕಲಾವಿದರಾದ ಜನಕ ನಾಯಕ, ದೇವರಾಜು, ಆಶಾ, ಜಗದೀಶ್ ಕುಮಾರ್ ಇತರರಿದ್ದರು.
ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಮಕ್ಕಳಿಗೆ ಸಾಮಾಜಿಕ ಪಿಡುಗು ನಿವಾರಣೆ ಕುರಿತು ಜಾಗೃತಿ ಮೂಡಿಸಲು ಬೀದಿ ನಾಟಕಗಳು ಪರಿಣಾಮಕಾರಿಯಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಗ್ರಂಥಾಲಯ ಜಾಗೃತಿ ಸಮಿತಿ ಜಿಲ್ಲಾ ಸದಸ್ಯ ಕೆ.ಎಂ.ನಾಗರಾಜು ಅಭಿಪ್ರಾಯಪಟ್ಟರು.
ತಾಲೂಕಿನ ಕಡವಿನ ಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಲಾವಿದ ಕುಮಾರ್ ಕಟ್ಟೆ ಬೆಳುಗುಳಿ ತಂಡದವರು ನಡೆಸಿಕೊಟ್ಟ ಬೀದಿ ನಾಟಕ ಕಾರ್ಯಕ್ರಮಕ್ಕೆ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಯುವ ಸಮೂಹ ಮತ್ತು ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆಯಿಂದ ಕಲೆ, ಸಾಂಸ್ಕೃತಿಕ, ಕ್ರೀಡೆ ಮುಂತಾದ ಪ್ರಕಾರಗಳಿಂದ ದೂರವಾಗುತ್ತಿದ್ದಾರೆ. ಎಲ್ಲರೂ ಪುಸ್ತಕಗಳನ್ನು ಹೆಚ್ಚು ಓದುವ ಮೂಲಕ ಜ್ಞಾನವಂತರಾದರೆ ಸಾಮಾಜಿಕ ಪಿಡುಗುಗಳು ಸಂಪೂರ್ಣವಾಗಿ ನಶಿಸಿ ಹೋಗುತ್ತವೆ ಎಂದರು.
ವರದಕ್ಷಿಣೆ, ಬಾಲ್ಯ ವಿವಾಹ, ಗ್ರಾಮ ನೈರ್ಮಲ್ಯ, ಸ್ವಚ್ಛತೆ ಪರಿಸರ ಸಂರಕ್ಷಣೆ, ಶಿಕ್ಷಣದ ಜಾಗೃತಿ ಮತ್ತು ಮೂಢನಂಬಿಕೆಗಳ ಕುರಿತು ಕಲಾವಿದರು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು.
ಬಾಗಿವಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮಮ್ಮ ಶ್ರೀನಿವಾಸ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಪಿ.ಯಶಸ್ವಿನಿ, ಕಲಾವಿದರಾದ ಜನಕ ನಾಯಕ, ದೇವರಾಜು, ಆಶಾ, ಜಗದೀಶ್ ಕುಮಾರ್ ಹಾಗೂ ಶ್ರೀ ಶಕ್ತಿ ಸ್ವ ಸಹಾಯ ಸಂಘದ ಸದಸ್ಯರು ಇತರರಿದ್ದರು.