ಚನ್ನರಾಯಪಟ್ಟಣದ ವಾರ್ಡ್ ನಂ.1 ರಲ್ಲಿ ನದಿ ಮೂಲದಿಂದ ಕುಡಿಯುವ ನೀರು ಕಲ್ಪಿಸುವ 25 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ಆರ್.ಯತೀಶ್, ಜಿ.ಆರ್. ಸುರೇಶ್, ಕಿರಣ್, ಕಾಂತಣ್ಣ, ನಂಜುಂಡಪ್ಪ, ಮಂಜಣ್ಣ, ರಾಜು, ಶಿವು, ಮಂಜುನಾಥ್ ಇದ್ದರು.
ಚನ್ನರಾಯಪಟ್ಟಣ: ಮೂಲ ಸೌಕರ್ಯಗಳಲ್ಲಿ ಪ್ರಮುಖವಾದ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ನುಗ್ಗೇಹಳ್ಳಿ ರಸ್ತೆಯ ವಾರ್ಡ್ ನಂ.1 ರಲ್ಲಿ ನದಿ ಮೂಲದಿಂದ ಕುಡಿಯುವ ನೀರು ಕಲ್ಪಿಸುವ 25 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ವಾರ್ಡ್ ನಂ-1ರ ನಿವಾಸಿಗಳ ಬಹುದಿನಗಳ ಬೇಡಿಕೆಯಾದ ನದಿ ಮೂಲದ ನೀರನ್ನು ಪೂರೈಸಲು ಕ್ರಮ ಕೈಗೊಂಡಿದ್ದು, ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡ ನಂತರ ನದಿ ಮೂಲದ ನೀರನ್ನು ಸರಬರಾಜು ಮಾಡಲಾಗುವುದು ಮತ್ತು ಮಹಾಲಿಂಗಪ್ಪ ಲೇಔಟ್‌ಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.
94 ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಇಲ್ಲಿನ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಒಂದಷ್ಟು ವ್ಯಾಪ್ತಿಯು ದಿಂಡಗೂರು ಹಾಗೂ ಜನಿವಾರ ಗ್ರಾಮ ಪಂಚಾಯಿತಿಗೆ ಸೇರಲಿದ್ದು ಕಾನೂನು ರೀತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಿ ಅಧಿಕೃತವಾಗಿ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದರು.
ಪುರಸಭೆ ವ್ಯಾಪ್ತಿಗೆ ಸೇರಿರುವ ಹಿನ್ನೆಲೆಯಲ್ಲಿ ಯುಜಿಡಿ ವ್ಯವಸ್ಥೆಯನ್ನು ಸಹ ಮಹಾಲಿಂಗಪ್ಪ ಲೇಔಟ್ ಸೇರಿದಂತೆ ಇಲ್ಲಿನ ಬಡಾವಣಿಗೂ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಲಭ್ಯವಾಗುವ ಅನುದಾನ ಬಳಕೆ ಮಾಡಿಕೊಂಡು ಅಭಿವೃದ್ಧಿಗೊಳಿಸಲಾಗುವುದು ಎಂದರು.
ಇತ್ತೀಚೆಗೆ ಮನೆ ಗಣತಿ ಜರುಗಿದು,್ದ ಅರಸೀಕೆರೆ ನಗರಸಭೆಯು 19,200 ಜನವಸತಿ ಹೊಂದಿದ್ದರೆ, ಚನ್ನರಾಯಪಟ್ಟಣ ಪುರಸಭೆ 20,500 ಮನೆಗಳನ್ನು ಹೊಂದಿದೆ. ಆದ್ದರಿಂದ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಹೆಚ್ಚಿನ ಅನುದಾನ ಅಗತ್ಯವಿದೆ ಎಂದು ತಿಳಿಸಿದರು.
ಪಟ್ಟಣದ ಯುಜಿಡಿ ವ್ಯವಸ್ಥೆಯನ್ನು ಸೂಕ್ತವಾಗಿ ನಿರ್ವಹಿಸಲು 130 ಕೋಟಿ ರೂ. ಅನುದಾನ ಅಗತ್ಯವಿರುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೇ.50 ರಷ್ಟು ಅನುದಾನ ನೀಡಿದರೆ ನಾಲ್ಕು ಭಾಗವಾಗಿ ವಿಂಗಡಿಸಿ ಹೈಟೆಕ್ ಮಾದರಿಯಲ್ಲಿ ಯುಜಿಡಿ ವ್ಯವಸ್ಥೆ ಮಾಡಿ ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಸರ್ಕಾರದಿಂದ 15 ನೇ ಹಣಕಾಸಿನ ಯೋಜನೆಯಡಿ ಪಟ್ಟಣದ ಅಭಿವೃದ್ಧಿಗೆ 1.50 ಕೋಟಿ ರೂ. ಅನುದಾನ ಲಭ್ಯವಾಗಲಿದ್ದು, ಚರಂಡಿ ನಿರ್ಮಾಣಕ್ಕೆ ಕೇವಲ 75 ಲಕ್ಷ ರೂ. ಬಳಕೆ ಮಾಡಬಹುದು. ಇದರಿಂದ ಪಟ್ಟಣವನ್ನು ಪರಿಪೂರ್ಣವಾಗಿ ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ. ಆದರೆ ಪುರಸಭೆಯ ತೆರಿಗೆ ಹಣವು ಸೋರಿಕೆ ಆಗದಂತೆ ಕ್ರಮವಹಿಸಿ 3 ರಿಂದ 4 ವರ್ಷದಲ್ಲಿ ಒಟ್ಟು 15 ಕೋಟಿ ರೂ. ತೆರಿಗೆ ಹಣದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಪಟ್ಟಣವನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಆರ್.ಯತೀಶ್, ಪುರಸಭೆಯ ಮಾಜಿ ಅಧ್ಯಕ್ಷ ಜಿ.ಆರ್.ಸುರೇಶ್, ದಿಂಡಗೂರು ಸೊಸೈಟಿ ಮಾಜಿ ಅಧ್ಯಕ್ಷ ನಂಜುಂಡಪ್ಪ, ಪ್ರಮುಖರಾದ ಕಿರಣ್, ಕಾಂತಣ್ಣ ಮಂಜಣ್ಣ, ರಾಜು, ಶಿವು, ಮಂಜುನಾಥ್ ಹಾಗೂ ಇತರರು ಇದ್ದರು.