ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ವಿ.ಜಿ.ದ್ಯಾವೇಗೌಡ ಮಾತನಾಡಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ನಮ್ಮ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದೊಂದಿಗೆ ಸಾಗುತ್ತಿರುವ ಈ ಸಂಘಟನೆ ದೇಶದ ಮಾದರಿ ಶಿಕ್ಷಕರ ಸಂಘಟನೆಗಳಲ್ಲೊಂದು. ಶಿಕ್ಷಕರ ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಂಘ ನಿರಂತರ ಪ್ರಯತ್ನ ನಡೆಸಿದ್ದು, ಕಳೆದ ಆರು ತಿಂಗಳಲ್ಲಿ ಸಂಘ ಸಾಧಿಸಿದ ಪ್ರಮುಖ ಸಾಧನೆಗಳು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಶಿಕ್ಷಕರ ಪರ ತಿದ್ದುಪಡಿ, ಸಹಶಿಕ್ಷಕರಿಂದ ಮುಖ್ಯ ಶಿಕ್ಷಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ ನಿಯಮಾವಳಿ, ಹಿರಿಯ ಮುಖ್ಯ ಶಿಕ್ಷಕರಿಗೆ ಕೌನ್ಸೆಲಿಂಗ್ ಮೂಲಕ ಬಡ್ತಿ, ದೈಹಿಕ ಶಿಕ್ಷಣ ಶಿಕ್ಷಕರಿಗೆ ಗ್ರೇಡ್1 ಬಡ್ತಿ, ರಾಜ್ಯದ 1.5 ಲಕ್ಷ ಶಿಕ್ಷಕರಿಗೆ ಉಚಿತ ಐಟಿ ಹಾಗೂ ಇ- ಫೈಲಿಂಗ್ ಸೌಲಭ್ಯ, ಶಾಲೆಗಳಿಗೆ ಕುಡಿಯುವ ನೀರು ಮತ್ತು ಶೌಚಗೃಹ ನಿರ್ವಹಣೆಗೆ ಅನುದಾನ, ಮಹಿಳಾ ಶಿಕ್ಷಕರಿಗೆ ವೇತನ ಸಹಿತ ಋತುಚಕ್ರ ರಜೆ, ಆಕಸ್ಮಿಕ ನಿಧನರಾದ ಶಿಕ್ಷಕರ ಕುಟುಂಬಗಳಿಗೆ ಪರಿಹಾರ, 45 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ವರ್ಗಾವಣೆ ಭಾಗ್ಯ, ವಿದ್ಯುತ್ ಬಿಲ್ ಉಚಿತ, ಕ್ರೀಡಾ ಚಟುವಟಿಕೆಗಳಿಗೆ ಪ್ರತ್ಯೇಕ ಅನುದಾನ ಸೇರಿದಂತೆ ಹಲವು ಶಿಕ್ಷಕಪರ ನಿರ್ಣಯಗಳನ್ನು ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಗಮನ ಸೆಳೆದು ಅನೇಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲಾಗಿದೆ.