ಸಮಾಜದಲ್ಲಿ ಸೌಹಾರ್ದತೆ ಬೆಳೆಸಲಿದೆ ಆಧ್ಯಾತ್ಮಿಕ ಅರಿವು

ಬೇಲೂರಿನಲ್ಲಿ ಆಯೋಜಿಸಿದ್ದ ರಾಜಯೋಗ ಭವನ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿದ್ದರು.
ಬೇಲೂರಿನಲ್ಲಿ ಆಯೋಜಿಸಿದ್ದ ರಾಜಯೋಗ ಭವನ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿದ್ದರು.
Published on
ಬೇಲೂರು: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸೇವಾ ಕೇಂದ್ರದಿಂದ ನೂತನ ರಾಜಯೋಗ ಭವನ ನಿರ್ಮಾಣಕ್ಕಾಗಿ ಇತ್ತೀಚೆಗೆ ಪಟ್ಟಣದ 6ನೇ ವಾರ್ಡ್‌ನ ವಿದ್ಯಾವಿಕಾಸ ಶಾಲೆ ಸಮೀಪ ಭೂಮಿಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಮೈಸೂರು ಉಪ ವಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಲಕ್ಷ್ಮೀಜಿ, ಭಗವಂತನು ಸರ್ವವ್ಯಾಪಿಯಾಗಿದ್ದರೂ ಆಧ್ಯಾತ್ಮಿಕ ಕೇಂದ್ರಗಳು ಶಾಂತಿ, ಪಾವಿತ್ರ್ಯ ಹಾಗೂ ದೈವಿಕ ಮೌಲ್ಯಗಳ ಪ್ರತೀಕವಾಗಿವೆ. ಆತ್ಮಜ್ಞಾನ ಮತ್ತು ಆಧ್ಯಾತ್ಮಿಕ ಅರಿವು ವ್ಯಕ್ತಿಯ ಜೀವನವನ್ನು ಪರಿವರ್ತಿಸಿ ಕುಟುಂಬ ಹಾಗೂ ಸಮಾಜದಲ್ಲಿ ಸೌಹಾರ್ದತೆಯನ್ನು ಬೆಳೆಸುತ್ತದೆ ಎಂದು ಹೇಳಿದರು.
40 ವರ್ಷಗಳಿಂದ ಬೇಲೂರಿನಲ್ಲಿ ಬ್ರಹ್ಮಕುಮಾರಿ ಸಂಸ್ಥೆ ಆಧ್ಯಾತ್ಮಿಕದೊಂದಿಗೆ ಸಮಾಜಮುಖಿ ಸೇವಾ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದು, ಇದೀಗ ಸ್ವಂತ ಕಟ್ಟಡ ನಿರ್ಮಾಣಕ್ಕೆ ಚಾಲನೆಗೆ ಮುಂದಾಗಿರುವುದು ಮಹತ್ವದ ಘಟ್ಟವಾಗಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಕಟ್ಟಡದ ತಳಪಾಯ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ. ನೂತನ ರಾಜಯೋಗ ಭವನವು ಸಾರ್ವಜನಿಕರ ಆಧ್ಯಾತ್ಮಿಕ ಉನ್ನತಿ, ಮೌಲ್ಯಾಧಾರಿತ ಜೀವನ ಹಾಗೂ ವಿಶ್ವ ಕಲ್ಯಾಣದ ಸಂದೇಶ ಪ್ರಸಾರಕ್ಕೆ ಪ್ರಮುಖ ಕೇಂದ್ರವಾಗಲಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಪ್ರಜಾಪಿತ ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದ ಸೇವಾ ಕೇಂದ್ರಕ್ಕೆ ಸ್ವಂತ ನಿವೇಶನ ಹೊಂದುತ್ತಿರುವುದು ಸಂತಸದ ಸಂಗತಿ. ಹಲವು ವರ್ಷಗಳಿಂದ ಸೇವಾ ಕೇಂದ್ರದ ಅಕ್ಕಂದಿರ ನಿರಂತರ ಪ್ರಯತ್ನದಿಂದ ನಿವೇಶನ ದೊರೆತಿದೆ. ಇದು ಸಂಸ್ಥೆಯ ಸಮಾಜಮುಖಿ ಸೇವಾ ಕಾರ್ಯಗಳಿಗೆ ಭದ್ರ ನೆಲೆ ಒದಗಿಸಲಿ. ಮುಂದಿನ ದಿನಗಳಲ್ಲಿ ಇಲ್ಲಿ ನಿರ್ಮಾಣವಾಗುವ ರಾಜಯೋಗ ಭವನವು ವೃದ್ಧರು, ಸಂಕಷ್ಟದಲ್ಲಿರುವವರು ಹಾಗೂ ಮಾನಸಿಕ ನೆಮ್ಮದಿ ಬಯಸುವವರಿಗೆ ಆಶ್ರಯ ಕೇಂದ್ರವಾಗಲಿ ಎಂದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ರಾಜಯೋಗಿನಿ ಬ್ರಹ್ಮಕುಮಾರಿ ಮೀನಾಕ್ಷಿ, ಬೇಲೂರು ಸೇವಾ ಕೇಂದ್ರದ ಯೋಗೇಶ್ ವಿನೋದ್, ಪುರಸಭೆ ಸದಸ್ಯೆ ಸೌಮ್ಯ ಸುಬ್ರಹ್ಮಣ್ಯ, ಹಾಸನ ಸೇವಾ ಕೇಂದ್ರದ ರಾಜಣ್ಣ, ದಯಾನಂದ್, ರಾಮಾನಂದ್, ಲಕ್ಷ್ಮಣ್, ಧನಲಕ್ಷ್ಮಿ, ಜಯಂತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net