ತಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿ.ಜಿ. ಕೊಪ್ಪಲು ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಸಿಮೆಂಟ್ ಮಂಜು ಭೂಮಿಪೂಜೆ ನೆರವೇರಿಸಿದರು. ಉಮಾ ರವಿ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ, ಧ್ರುವಕುಮಾರ್, ಸಮುದ್ರವಳ್ಳಿ ಹರೀಶ್ ಇತರರು ಇದ್ದರು.
ಆಲೂರು: ತಾಲೂಕಿನ ತಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗಾಗಿ ತಾವು ಅಧಿಕಾರಕ್ಕೆ ಬಂದ ಬಳಿಕ ಸುಮಾರು 7 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಬುಧವಾರ ತಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿ.ಜಿ. ಕೊಪ್ಪಲು ಗ್ರಾಮದಲ್ಲಿ ಸುಮಾರು 90 ಲಕ್ಷ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ದೇವಾಲಯಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಜನರ ಬೇಡಿಕೆಗಳಿಗೆ ಸ್ಪಂದಿಸಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಅಭಿವೃದ್ಧಿ ಅನುದಾನದಡಿ ತಾಳೂರು ಸಮುದ್ರವಳ್ಳಿ ಬಸವೇಶ್ವರ ದೇವಸ್ಥಾನಕ್ಕೆ 3 ಲಕ್ಷ ರೂ., ಚಿಕ್ಕ ಕಣಗಾಲ್ ಕಾಲೇಶ್ವರಸ್ವಾಮಿ ದೇವಸ್ಥಾನಕ್ಕೆ 2.50 ಲಕ್ಷ ರೂ., ಚೌಡೇಶ್ವರಿ ದೇವಸ್ಥಾನಕ್ಕೆ 2 ಲಕ್ಷ ರೂ., ಬೊಮ್ಮನಮನೆ ಬನಶಂಕರಿ ದೇವಸ್ಥಾನಕ್ಕೆ 5 ಲಕ್ಷ ರೂ., ಬೆಳ್ಳಾವರ ರಂಗನಾಥಸ್ವಾಮಿ ದೇವಸ್ಥಾನಕ್ಕೆ 1.50 ಲಕ್ಷ ರೂ. ಸೇರಿ ವಿವಿಧ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ವಾಟೆಹೊಳೆ-ಬೆಳ್ಳಾವರ ರಸ್ತೆ ಅಭಿವೃದ್ಧಿಗೆ 68.44 ಲಕ್ಷ ರೂ., ಕಲ್ಕೆರೆ ರಸ್ತೆ ಅಭಿವೃದ್ಧಿಗೆ 58.41 ಲಕ್ಷ ರೂ., ಕಾಮತಿ ಕಾಲೋನಿ ರಸ್ತೆ ಅಭಿವೃದ್ಧಿಗೆ 7 ಲಕ್ಷ ರೂ. ಹಾಗೂ ಕಾಂತಿ ಗ್ರಾಮದ ಮುಖ್ಯವೃತ್ತದಿಂದ ಚರಂಡಿವರೆಗೆ ರಸ್ತೆ ಅಭಿವೃದ್ಧಿಗೆ ಸುಮಾರು 7 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷೆ ಉಮಾ ರವಿ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ, ಧ್ರುವ ಕುಮಾರ್, ಸಮುದ್ರವಳ್ಳಿ ಹರೀಶ್, ವೆಂಕಟೇಶ್, ನವೀನ್, ಅಣ್ಣಪ್ಪ, ಸಿದ್ದಪ್ಪ, ಮಹೇಂದ್ರ, ಜಯಂತಿ ಇತರರು ಇದ್ದರು.