ಬೇಲೂರು: ಪುರಸಭೆಯ 1ನೇ ವಾರ್ಡ್‌ನ ಹೊಸನಗರ ಬಡಾವಣೆಗೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿದ ಶಾಸಕ ಎಚ್.ಕೆ.ಸುರೇಶ್, ಸ್ಥಳೀಯರ ಸಮಸ್ಯೆ ಆಲಿಸಿ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಹೊಸನಗರ ಬಡಾವಣೆಗೆ ಶಾಸಕರು ಭೇಟಿ ನೀಡುತ್ತಿದ್ದಂತೆ ಸಮಸ್ಯೆಗಳ ಸುರಿಮಳೆಯನ್ನೇ ಸುರಿಸಿದ ಬಡಾವಣೆ ನಿವಾಸಿಗಳು ರಸ್ತೆ, ಕುಡಿಯುವ ನೀರು, ಉದ್ಯಾನಗಳ ಒತ್ತುವರಿ ಹಾಗೂ ಹೈಟೆನ್ಷನ್ ವಿದ್ಯುತ್ ಲೈನ್ ಹಾದು ಹೋಗಿರುವ ಕೆಳ ಭಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿ ಕೊಂಡಿರುವ ಕುರಿತು ಗಮನ ಸೆಳೆದರು.
ಅಲ್ಲದೆ ಮರಗಳ ಮೇಲೆ ವಿದ್ಯುತ್ ತಂತಿ ಹಾದು ಹೋಗಿದ್ದು ತೆರವು ಗೊಳಿಸುವಂತೆ ಮತ್ತು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಿರುವವರು ಪುರಸಭೆಯಿಂದ ಹಕ್ಕುಪತ್ರದೊಂದಿಗೆ ಇ ಸ್ವತ್ತು ಕೊಡಿಸುವಂತೆ ಒತ್ತಾಯಿಸಿದರು.
ಸಾರ್ವಜನಿಕರ ಮನವಿ ಆಲಿಸಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ಹೊಸನಗರ ಬಡಾವಣೆ ಅಭಿವೃದ್ಧಿಗೆ ಈಗಾಗಲೇ ಹೆಚ್ಚಿನ ಆದ್ಯತೆ ನೀಡಿದ್ದು, 50 ಲಕ್ಷ ರೂ. ಅಲ್ಪಸಂಖ್ಯಾತರ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಮತ್ತು 30 ಲಕ್ಷ ರೂ. ಅನುದಾನದಲ್ಲಿ ಹಾಸನ ಹೆದ್ದಾರಿ ರಸ್ತೆಯಿಂದ ಹೊಸನಗರದ ಮುಖ್ಯರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿ ವಾಸ ಮಾಡುವ ನಾಗರಿಕರು ಮನೆ ಮತ್ತು ನಿವೇಶನ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಆಶ್ರಯ ಸಮಿತಿ ಸಭೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಅಲ್ಲದೆ ಈ ವಾರ್ಡ್‌ನಲ್ಲಿ 8 ಉದ್ಯಾನಗಳು ಇದೆ ಎಂದು ಸಾರ್ವಜನಿಕರು ಹೇಳುತ್ತಿದ್ದು, ಪುರಸಭೆ ಅಧಿಕಾರಿಗಳು ಅವುಗಳ ಅಭಿವೃದ್ಧಿ ಮತ್ತು ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವಂತೆ ಸೂಚಿಸಿದ್ದೇನೆ ಎಂದರು.
ಇಲ್ಲಿನ ನಾಗರಿಕರ ಬಹುದಿನಗಳ ಬೇಡಿಕೆಯಾದ ಒಳ ಚರಂಡಿ ವ್ಯವಸ್ಥೆ ಬಗ್ಗೆ ಶೀಘ್ರ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ಹೊಸನಗರ ಬಡಾವಣೆಗೆ ಪರ್ಯಾಯ ಸಂಪರ್ಕ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಗಣಪತಿ ದೇವಾಲಯಕ್ಕೆ ಶಾಸಕರ ನಿಧಿಯಿಂದ 3 ಲಕ್ಷ ರೂ.ಅನುದಾನ ನೀಡಲಾಗುವುದು. ದೇವಸ್ಥಾನದ ಸುತ್ತವಿರುವ ಯಗಚಿ ಎಡದಂಡೆ ನಾಲೆಗೆ ತಡೆಗೋಡೆ ನಿರ್ಮಿಸಲು ಕ್ರಿಯಾಯೋಜನೆ ತಯಾರಿಸುವಂತೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, 13 ಕೋಟಿ ರೂ. ಅನುದಾನದಲ್ಲಿ 23 ವಾರ್ಡ್‌ಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ಆದ್ಯತೆ ಮೇರೆಗೆ ಕೆಲಸ ಮಾಡಿಸಲಾಗುವುದು. ಜತೆಗೆ ವಿಶ್ವ ವಿಖ್ಯಾತ ಪ್ರವಾಸಿ ತಾಣವಾದ ಬೇಲೂರು ಪಟ್ಟಣದ ಎಲ್ಲ ವಾರ್ಡ್‌ಗಳನ್ನು ಸ್ವಚ್ಛವಾಗಿಡುವುದಕ್ಕೆ ಅಧಿಕಾರಿಗಳು ಸದಾ ಮುಂದಾಗಬೇಕು. ಪುರಸಭೆ ವ್ಯಾಪ್ತಿಯಲ್ಲಿರುವ ಎಲ್ಲ ಉದ್ಯಾನಗಳ ಅಭಿವೃದ್ಧಿ ಹಾಗೂ ಪಟ್ಟಣದಲ್ಲಿ ಪರಿಸರ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಿ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪುರಸಭೆ ಉಪಾಧ್ಯಕ್ಷೆ ಉಷಾ, ಸದಸ್ಯೆ ಮೀನಾಕ್ಷಿ, ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿ, ಆರೋಗ್ಯಾಧಿಕಾರಿ ಲೋಹಿತ್, ಸೆಸ್ಕ್ ಎಇಇ ಬಸವರಾಜ್, ಕಂದಾಯ ಇಲಾಖೆ ಅಧಿಕಾರಿ ಉದೀತ್, ಶ್ರೀದೇವಿ, ಹಿರಿಯ ಮುಖಂಡ ಡಿ.ಬಿ.ಮೋಹನ್ ಕುಮಾರ್, ಮಂಜುನಾಥ್ ಇತರರಿದ್ದರು.