ಬೇಲೂರು ದೇಗುಲದಲ್ಲಿ ದಾಸೋಹ ಪುನರಾರಂಭ

ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದಾಸೋಹ ಭವನ ಶನಿವಾರ ಪುನರಾರಂಭವಾಗಿದ್ದರಿಂದ ಅಡುಗೆ ಸಿದ್ಧಪಡಿಸಿ ಭಕ್ತರಿಗೆ ಪ್ರಸಾದ ಬಡಿಸಲಾಯಿತು.
ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದಾಸೋಹ ಭವನ ಶನಿವಾರ ಪುನರಾರಂಭವಾಗಿದ್ದರಿಂದ ಅಡುಗೆ ಸಿದ್ಧಪಡಿಸಿ ಭಕ್ತರಿಗೆ ಪ್ರಸಾದ ಬಡಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ ಭೇಟಿ
  • ಗ್ಯಾಸ್ ಸಿಲಿಂಡರ್ ವ್ಯವಸ್ಥೆಗೆ ಕ್ರಮ
  • ಎರಡು ದಿನದಿಂದ ಬಂದ್ ಆಗಿದ್ದ ಶ್ರೀ ಚನ್ನಕೇಶವಸ್ವಾಮಿ ಪ್ರಸಾದ ನಿಲಯ
ಬೇಲೂರು: ಅಡುಗೆ ಅನಿಲ ಕೊರತೆಯಿಂದಾಗಿ ಎರಡು ದಿನದಿಂದ ಬಂದ್ ಆಗಿದ್ದ ಬೇಲೂರು ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಚನ್ನಕೇಶವಸ್ವಾಮಿ ದೇಗುಲದ ದಾಸೋಹ ಶನಿವಾರ ಪುನಾರಂಭವಾಯಿತು.
ಅಡುಗೆ ಅನಿಲಯದ ಸಿಲಿಂಡರ್ ಸರಬರಾಜಿನಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ದಾಸೋಹ ಭವನದಲ್ಲಿ ಎರಡು ದಿನ ದಾಸೋಹ ಬಂದ್ ಮಾಡಲಾಗಿತ್ತು. ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ ಶನಿವಾರ ದಾಸೋಹ ಭವನಕ್ಕೆ ಆಗಮಿಸಿ ಪರಿಸೀಲಿಸಿ ನಂತರ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಾಲೂಕು ಆಡಳಿತದಿಂದ ತಾತ್ಕಾಲಿಕವಾಗಿ ದಾಸೋಹಕ್ಕೆ ಸಿಲಿಂಡರ್‌ಗಳನ್ನು ಪೂರೈಸುವ ಮೂಲಕ ಅಡುಗೆ ತಯಾರಿಸಲು ಸಹಕರಿಸಿದರು. ಬಳಿಕ ಭಕ್ತರಿಗೆ ಪ್ರಸಾದ ಬಡಿಸಲಾಯಿತು.
ಕೆಲವೇ ದಿನಗಳಲ್ಲೇ ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದ್ದು 15 ದಿನಗಳ ಕಾಲ ಭಕ್ತರು ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದೇವರ ಪೂಜೆ ಹಾಗೂ ದರ್ಶನಕ್ಕೆ ಆಗಮಿಸಲಿದ್ದಾರೆ.
ಯುದ್ಧದಿಂದ ಅಡುಗೆ ಅನಿಲ ಸರಬರಾಜಿನಲ್ಲಿ ಸಮಸ್ಯೆಯಾಗಿದ್ದರಿಂದ ದೇಗುಲದ ದಾಸೋಹ ಎರಡು ದಿನ ನಿಂತಿತ್ತು. ಆದರೆ ವಿಷಯ ಗಮನಕ್ಕೆ ಬಂದ ನಂತರ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಾತ್ಕಾಲಿಕವಾಗಿ ವಾರಕ್ಕೆ ಆಗುವಷ್ಟು ಅಡುಗೆ ಅನಿಲದ ವ್ಯವಸ್ಥೆ ಮಾಡಲಾಗಿದೆ. ಅಷ್ಟರೊಳಗೆ ಗ್ಯಾಸ್ ಏಜೆನ್ಸಿಯವರು ಸಿಲಿಂಡರ್‌ಗಳ ವ್ಯವಸ್ಥೆ ಮಾಡುವುದರಿಂದ ದಾಸೋಹ ಯಾವುದೇ ತೊಂದರೆ ಇಲ್ಲದೆ ನಿರಂತರವಾಗಿ ನಡೆಯಲಿದೆ.
ಶ್ರೀಧರ್ ಕಂಕಣವಾಡಿ ತಹಸೀಲ್ದಾರ್, ಬೇಲೂರು
ಗ್ಯಾಸ್ ಏಜೆನ್ಸಿಯವರು ಸಿಲಿಂಡರ್ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದಿದ್ದಾರೆ. ಇದರ ನಡುವೆ ತಾಲೂಕು ಆಡಳಿತ ಹಾಗೂ ತಹಸೀಲ್ದಾರ್ ಸಹಕಾರದಿಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ತಾತ್ಕಾಲಿಕವಾಗಿ ಬೇರೆಡೆಯಿಂದ ಸಿಲಿಂಡರ್‌ಗಳನ್ನು ತಂದು ದಾಸೋಹ ವ್ಯವಸ್ಥೆ ಮಾಡಲಾಗಿದೆ. ಶನಿವಾರ ನೂರಾರು ಭಕ್ತರು ಭವನದಲ್ಲಿ ಪ್ರಸಾದ ಸ್ವೀಕರಿಸಿದ್ದಾರೆ.
ಯೋಗೀಶ್ ಇಒ, ಶ್ರೀ ಚನ್ನಕೇಶವಸ್ವಾಮಿ ದೇಗುಲ, ಬೇಲೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net