ಅರಸೀಕೆರೆ: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಹೆಸರಿನಲ್ಲಿ ಅನಾಮಧೇಯ ಕರ ಪತ್ರ ಮುದ್ರಿಸಿ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದಕ್ಕೆ ವೀರಶೈವ-ಲಿಂಗಾಯತ ಸಮಾಜದ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಲಾಳನಕೆರೆ ಗ್ರಾಮದ ದೇವಿ ಸನ್ನಿಧಿಯಲ್ಲಿ ಹಣಕೊಟ್ಟಿರುವ ಕುರಿತು ಜೆಡಿಎಸ್ ಮುಖಂಡರ ನಡುವೆ ನಡೆದ ಆಣೆ, ಪ್ರಮಾಣ ವೈಯಕ್ತಿಕವಾಗಿದೆ. ಹೀಗಿದ್ದರೂ ಸುಖಾಸುಮ್ಮನೆ ಸಂಘಟನೆ ಹೆಸರಿನಲ್ಲಿ ಕರಪತ್ರ ಮುದ್ರಿಸಿ ಹಂಚಿರುವುದು. ಸರಿಯಲ್ಲ.ರಾಜಕಾರಣದಲ್ಲಿ ರಾಜಕೀಯ ಹೋರಾಟ, ಪ್ರತಿ ಹೋರಾಟ ಇದ್ದೇ ಇರುತ್ತದೆ. ಸಾಮಾಜಿಕ ಸೌಹಾರ್ದತೆ ಕಾಪಾಡುವ ಬದಲು ಸಮುದಾಯಗಳ ನಡುವೆ ಒಡಕು ಉಂಟುಮಾಡುವ ಹುನ್ನಾರ ನಡೆದಿದೆ. ಇಂತಹ ಬೆಳವಣಿಗೆ ನಾಗರಿಕ ಸಮಾಜಕ್ಕೆ ಶೋಭೆ ತರುವುದಿಲ್ಲ ಎಂದು ಮುಖಂಡರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕರಪತ್ರ ಮುದ್ರಿಸಿ ಹಂಚಿಕೆ ಮಾಡಿರುವವರ ಪತ್ತೆಗೆ ಕೋರಿ ಶಾಸಕರು ಈಗಾಗಲೇ ದೂರು ನೀಡಿದ್ದಾರೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕೊಡುವ ವಿಚಾರದಲ್ಲಿ ಶಿವಲಿಂಗೇಗೌಡರು ತಾರತಮ್ಯ ಮಾಡಿಲ್ಲ. ವಾಸ್ತವ ತಿಳಿಯದ ಕೆಲವರು ಕರಪತ್ರ ಹಂಚಿ ಅಪಪ್ರಚಾರ ಮಾಡಲು ಹೊರಟಿರುವುದನ್ನು ಬಲವಾಗಿ ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲು ಹಿಂದೇಟು ಹಾಕುವುದಿಲ್ಲ ಎಂದು ಹೇಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ, ಮುಖಂಡರಾದ ಗಂಜಿಗೆರೆ ಚಂದ್ರಶೇಖರ, ಜಿ.ಬಿ.ಶಶಿಧರ, ಸಿದ್ದಪ್ಪ, ಶಿವಯ್ಯ, ಉಮೇಶ, ಜಯಪ್ಪ, ಜಿಪಂ ಮಾಜಿ ಸದಸ್ಯ ಮಾಡಾಳು ಸ್ವಾಮಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.