ಮಹಿಳಾ ದೌರ್ಜನ್ಯ ವಿರೋಧಿಸಿ ಮೌನ ಪ್ರತಿಭಟನೆ

ಅರಕಲಗೂಡು ಅನಕೃ ವೃತ್ತದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸದಸ್ಯರು ಮೇಣದ ಬತ್ತಿ ಬೆಳಗಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಡಾ. ಸಾವಿತ್ರಿ, ಡಾ.ಪುಷ್ಪಲತಾ ಇತರರು ಇದ್ದರು.
ಅರಕಲಗೂಡು ಅನಕೃ ವೃತ್ತದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸದಸ್ಯರು ಮೇಣದ ಬತ್ತಿ ಬೆಳಗಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಡಾ. ಸಾವಿತ್ರಿ, ಡಾ.ಪುಷ್ಪಲತಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Silent protest
ಅರಕಲಗೂಡು: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸದಸ್ಯರು ಪಟ್ಟಣದಲ್ಲಿ ಶುಕ್ರವಾರ ಸಂಜೆ ಮೌನ ಪ್ರತಿಭಟನೆ ನಡೆಸಿದರು.
ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಆವರಣದಿಂದ ಮೇಣದ ಬತ್ತಿಗಳನ್ನು ಹಿಡಿದು ಅನಕೃ ವೃತ್ತಕ್ಕೆ ಮೆರವಣಿಗೆಯಲ್ಲಿ ಬಂದ ಮಹಿಳೆಯರು ಮಾನವ ಸರಪಳಿ ನಿರ್ಮಿಸಿದರು.
ಜಿಲ್ಲಾ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಗೌರವಾಧ್ಯಕ್ಷೆ ಡಾ. ಸಾವಿತ್ರಿ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ. 7 ಮತ್ತು 8 ರಂದು ಹಾಸನದಲ್ಲಿ ಬೃಹತ್ ಮಹಿಳಾ ಸಮಾವೇಶ ಏರ್ಪಡಿಸಲಾಗಿದೆ. ಸಮಾವೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯಗಳ ವಿರುದ್ಧ ದನಿ ಎತ್ತುವ ಮೂಲಕ ಮಹಿಳಾ ಸಮಾನತೆ ಮತ್ತು ಹಕ್ಕುಗಳ ರಕ್ಷಣೆ ಒತ್ತಾಯಿಸಿ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಮಹಿಳೆಯರಲ್ಲದೆ ಪುರುಷರೂ ಭಾಗವಹಿಸಿ ಮಹಿಳಾ ಸಮಸ್ಯೆಗಳ ಕುರಿತು ಅರಿವು ಪಡೆಯಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಪಾತ್ರವೂ ಪ್ರಮುಖವಾಗಿದ್ದು, ಅವರಿಗೆ ಸಮಾನ ಅವಕಾಶಗಳನ್ನು ನೀಡಿ ಗೌರವಿಸುವ ಮೂಲಕ ಸುಸ್ಥಿರ ಸಮಾಜ ನಿರ್ಮಿಸುವುದು ಅಗತ್ಯವಿದೆ ಎಂದರು.
ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷೆ ಎಚ್.ಎಸ್.ರಶ್ಮಿ ಪ್ರವೀಣ್ ಮಾತನಾಡಿ, ಮಹಿಳೆಯರಲ್ಲಿ ಅರಿವು ಮೂಡಿಸಲು ಕತ್ತಲಿನಿಂದ ಬೆಳಕಿನಡೆಗೆ ಎಂಬ ಘೋಷ ವಾಕ್ಯದಡಿ ಮೇಣದ ಬತ್ತಿ ಹಿಡಿದು ಮೌನ ಮೆರವಣಿಗೆ ನಡೆಸುವ ಮೂಲಕ ಮಹಿಳಾ ಸಮಾನತೆಗೆ ಒತ್ತಾಯಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನೂರಾರು ಮಂದಿ ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net