ಶನೈಶ್ಚರ ದೇಗುಲ ಮುಜರಾಯಿ ಇಲಾಖೆಗೆ ಸೇರಿಸಿ

ಕರ್ನಾಟಕ ಪ್ರಾಂತ ರೈತ ಸಂಘದ ಗೌರವಾಧ್ಯಕ್ಷ ಚಂದ್ರಹಾಸ
ಕರ್ನಾಟಕ ಪ್ರಾಂತ ರೈತ ಸಂಘದ ಗೌರವಾಧ್ಯಕ್ಷ ಚಂದ್ರಹಾಸ
Published on
ಚನ್ನರಾಯಪಟ್ಟಣ: ತಾಲೂಕಿನ ಜಿನ್ನೇನಹಳ್ಳಿ ಗ್ರಾಮದ ಶನೈಶ್ಚರ ದೇಗುಲವನ್ನು ಟ್ರಸ್ಟ್ ಇಲ್ಲವೇ ಮುಜರಾಯಿ ಇಲಾಖೆಗೆ ಸೇರಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಗೌರವಾಧ್ಯಕ್ಷ ಚಂದ್ರಹಾಸ ಒತ್ತಾಯಿಸಿದರು.
ನೂರಾರು ವರ್ಷಗಳ ಹಿನ್ನೆಲೆ ಇರುವ ದೇವಾಲಯವನ್ನು 2013ರಲ್ಲಿ ಜೀರ್ಣೋದ್ಧಾರಗೊಳಿಸಿ, ನಿರ್ವಹಣಾ ಕಾರ್ಯ ನೋಡಿಕೊಳ್ಳಲು ಜಿನ್ನೇನಹಳ್ಳಿ ಗ್ರಾಮದ ಮಧುಸೂದನ್ ಅವರನ್ನು ನೇಮಿಸಲಾಗಿತ್ತು. ಆದರೆ ದೇಗುಲಕ್ಕೆ ಸಂಬಂಧಪಟ್ಟ 7.5 ಲಕ್ಷ ರೂ.ಗಳನ್ನು ತಮ್ಮ ವೈಯಕ್ತಿಕ ಖಾತೆಗೆ ಇರಿಸಿಕೊಂಡಿದ್ದಲ್ಲದೆ, ಕಳೆದ 13 ವರ್ಷದ ಲೆಕ್ಕಪತ್ರಗಳನ್ನು ಸರಿಯಾಗಿ ನೀಡದಿರುವುದು ಹಲವು ಅನುಮಾನಗಳನ್ನು ಸೃಷ್ಟಿಸುತ್ತಿದೆ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಗ್ರಾಮದ ಸರ್ವೆ ನಂಬರ್ 8 ಮತ್ತು 9ರಲ್ಲಿ 1.14 ಎಕರೆ ಸರ್ಕಾರಿ ಗೋಮಾಳದಲ್ಲಿ ಇರುವ ಐತಿಹಾಸಿಕ ದೇಗುಲವನ್ನು 2013ರಲ್ಲಿ ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ಜೀರ್ಣೋದ್ಧಾರಗೊಳಿಸಲಾಗಿದೆ. ಹಂತ ಹಂತವಾಗಿ ಅಭಿವೃದ್ಧಿಗೊಳ್ಳುತ್ತಿರುವ ದೇಗುಲವನ್ನು ನೋಡಿಕೊಳ್ಳಲು ಮಧುಸೂದನ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಈಗ ದೇಗುಲವೇ ನಮ್ಮದು ಎಂಬುದಾಗಿ ಗ್ರಾಮಸ್ಥರನ್ನು ದೂರವಿರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಮಸ್ಥರ ಗಮನಕ್ಕೆ ತರದಂತೆ ತಮಗೆ ಬೇಕಾದವರನ್ನು ಸೇರಿಸಿಕೊಂಡು ಸಮಿತಿ ರಚನೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಕರಾರು ಮತ್ತು ಆಕ್ಷೇಪಣೆ ದೂರನ್ನು ಹಾಸನ ಉಪ ನಿಬಂಧಕರ ಕಚೇರಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ನೀಡಲಾಗಿದೆ. ಸಮಿತಿಯ ಮೂಲಕ ಕೋಟ್ಯಂತರ ರೂ. ಮೌಲ್ಯದ 1.14 ಎಕರೆ ಜಮೀನನ್ನು ತಮ್ಮ ಹೆಸರಿನಲ್ಲಿ ಲಪಟಾಯಿಸಲು ಒಳ ಸಂಚು ಮಾಡುತ್ತಿದ್ದಾರೆ ಎಂದು ದೂರಿದರು.
ಸಿಐಟಿಯು ಮುಖಂಡರಾದ ಎಚ್.ಎಸ್.ಮಂಜುನಾಥ್ ಮಾತನಾಡಿ, ತಾಲೂಕು ದಂಡಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಬೇಕು. ದೇಗುಲವನ್ನು ಮುಜರಾಯಿ ಇಲಾಖೆಗೆ ಸೇರಿಸುವುದರ ಜತೆಗೆ ಸಂಬಂಧಪಟ್ಟ ಜಮೀನನ್ನು ದೇಗುಲದ ನಿರ್ವಹಣೆ ಸಲುವಾಗಿ ಕಾಯ್ದಿರಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ತೇಜಸ್ ಗೌಡ, ಕಾರ್ಯದರ್ಶಿ ವಾಸು, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗೋಪಾಲ್, ಮಾಜಿ ಸದಸ್ಯ ದೇವರಾಜು, ರಂಗನಾಥ್, ರೇವಣ್ಣ, ಜಯರಾಮ್, ನಂಜುಂಡೇಗೌಡ, ಅಪ್ಪಾಜಿ, ಕುಮಾರ್, ಇತರರು ಇದ್ದರು.
ಚಿತ್ರ ಶೀರ್ಷಿಕೆ 10 ಸಿಆರ್‌ಪಿ-3ಎ.
ಚಂದ್ರಹಾಸ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net