ಸೇವಾ ಮನೋಭಾವ ಬೆಳೆಸಲಿದೆ ಸ್ಕೌಟ್ಸ್-ಗೈಡ್ಸ್

ಬೇಲೂರಿನ ಯುರೋಕಿಡ್ಸ್ ವಿದ್ಯಾ ವಿಕಾಸ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಕಬ್ಸ್ ಬುಲ್ ಬುಲ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ಬೇಲೂರಿನ ಯುರೋಕಿಡ್ಸ್ ವಿದ್ಯಾ ವಿಕಾಸ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಕಬ್ಸ್ ಬುಲ್ ಬುಲ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಪಿ.ಜಿ.ಆರ್.ಸಿಂಧ್ಯ ಅಭಿಮತ

ಬೇಲೂರು:

ಶಾಲೆಗಳಲ್ಲಿ ಶಿಕ್ಷಣದೊಂದಿಗೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೂಲಕ ಮಕ್ಕಳಲ್ಲಿ ಶಿಸ್ತು, ಸಮಯಪಾಲನೆ, ಸೇವಾ ಮನೋಭಾವ, ನಾಯಕತ್ವ, ಧೈರ್ಯ, ದೇಶಪ್ರೇಮ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಡಾ.ಪಿ.ಜಿ.ಆರ್.ಸಿಂಧ್ಯ ಹೇಳಿದರು.

ಪಟ್ಟಣದ ಯುರೋಕಿಡ್ಸ್ ವಿದ್ಯಾ ವಿಕಾಸ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕಬ್ಸ್ ಬುಲ್ ಬುಲ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಉತ್ತಮ ನಾಗರಿಕ ಗುಣಗಳನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ರಾಜ್ಯದಲ್ಲಿ 8.50 ಲಕ್ಷ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಾಲೂಕಿನಲ್ಲಿ 20 ಸಾವಿರ ಮಕ್ಕಳಿದ್ದು, ಪ್ರತಿಯೊಬ್ಬ ಮಗುವಿಗೂ ಈ ಬಗ್ಗೆ ಪರಿಚಯವಾಗಬೇಕು. ಸಂಘಟನೆಯ ಸದಸ್ಯತ್ವಕ್ಕಿಂತ ಅದರ ವಿಚಾರ, ಸೇವಾ ಮನೋಭಾವವನ್ನು ಮಕ್ಕಳಿಗೆ ತಲುಪಿಸುವುದು ಮುಖ್ಯ ಎಂದರು.
ಖಾಸಗಿ, ಸರ್ಕಾರಿ ಹಾಗೂ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಸ್ಕೌಟ್ಸ್-ಗೈಡ್ಸ್ ಘಟಕಗಳನ್ನು ಆರಂಭಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು. ಸಂಘಟನೆಯ ಅಧಿಕಾರಿಗಳು ಶಿಕ್ಷಣ ಇಲಾಖೆಯವರೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು
ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಪೂರಕವಾಗಿವೆ. ಶಾಲಾ ಶಿಕ್ಷಣದೊಂದಿಗೆ ಶಿಸ್ತು, ಸೇವೆ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯ ಮನೋಭಾವ ಬೆಳೆಸುವಲ್ಲಿ ಇಂತಹ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲ ಶಾಲೆಗಳಲ್ಲೂ ಇಂತಹ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ.ಶಿವರಾಜು ಮಾತನಾಡಿ, ಶಿಕ್ಷಣ ಎಂದರೆ ಕೇವಲ ಅಂಕ ಗಳಿಸುವುದಲ್ಲ. ಬದಲಾಗಿ ಶಿಸ್ತು, ಸಮಯ ಪಾಲನೆ, ಸೇವಾ ಮನೋಭಾವ, ನಾಯಕತ್ವ, ಧೈರ್ಯ, ದೇಶ ಪ್ರೇಮ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದೇ ನಿಜವಾದ ಶಿಕ್ಷಣ. ಶಿಕ್ಷಣದ ಜತೆಗೆ ಸಮಾಜ ಸೇವೆ, ಪರಿಸರ ಸಂರಕ್ಷಣೆ, ಸ್ವಚ್ಛತೆ, ಪರಸ್ಪರ ಸಹಕಾರ, ಕಷ್ಟದಲ್ಲಿರುವವರಿಗೆ ನೆರವಾಗುವ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಯುರೋಕಿಡ್ಸ್ ವಿದ್ಯಾವಿಕಾಸ ಪಬ್ಲಿಕ್ ಶಾಲೆ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎಂ.ರಂಗನಾಥ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ್ ಭಟ್, ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಸುರೇಶ್ ಗುರೂಜಿ, ಮಾಜಿ ಕಾರ್ಯದರ್ಶಿ ಪರಶುರಾಮ್, ಅನ್ನಪೂರ್ಣ ಎಜುಕೇಶನಲ್ ಮತ್ತು ಚಾರಿಟಬಲ್ ಟ್ರಸ್ಟಿ ಆಶಾ ರಂಗನಾಥ್, ಆಡಳಿತಾಧಿಕಾರಿ ಪದ್ಮಾ ಜಯಕುಮಾರ್ ಪಾಟೀಲ, ಯುರೋಕಿಡ್ಸ್ ಸಂಯೋಜಕಿ ಶಾಲಿನಿ ಕೇಶವ್, ಪ್ರಾಂಶುಪಾಲ ಬಾಲಾಜಿ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net