ಹೊಳೆನರಸೀಪುರ: ಅತ್ಯಮೂಲ್ಯ ಜೀವಜಲ ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಚನ್ನರಾಯಪಟ್ಟಣ ವಿಭಾಗದ ನಿರ್ದೇಶಕಿ ಲೀಲಾವತಿ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಳೆನರಸೀಪುರ ವತಿಯಿಂದ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಹೂಳೆತ್ತಲಾದ ದೊಡ್ಡಹಳ್ಳಿ ಗ್ರಾಮ ಪಂಚಾಯಿತಿಯ ಯಡೇಗೌಡನಹಳ್ಳಿ ಗ್ರಾಮದ ಚಾಣನಕಟ್ಟೆ ಕೆರೆಯ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ರಾಜ್ಯದಲ್ಲಿ ಒಂದು ಸಾವಿರ ಕೆರೆಗಳ ಹೂಳೆತ್ತಲಾಗಿದೆ. ಇದರಲ್ಲಿ ಯಡೇಗೌಡನಹಳ್ಳಿ ಕೆರೆ 950ನೇ ಕೆರೆ. ಈ ಕೆರೆಗೆ ಸುಮಾರು 6.22 ಲಕ್ಷ ರೂ. ವಿನಿಯೋಗ ಮಾಡಿ ಹೂಳೆತ್ತಿದ್ದು ಇದರಿಂದ ಕೆರೆಯಲ್ಲಿ ನೀರು ಸಂಗ್ರಹಣೆ ಹೆಚ್ಚಾಗಲಿದೆ. ಇದರಿಂದ ಕೃಷಿ, ಜಾನುವಾರುಗಳು ಕುಡಿಯಲು ಉಪಯೋಗವಾಗುತ್ತದೆ. ಸುತ್ತಮುತ್ತಲಿರುವ ಕೊಳವೆ ಬಾವಿಗಳೂ ರೀಚಾರ್ಜ್ ಆಗಲಿವೆ ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈಶ್ವರ ಬೆಣಕಟ್ಟಿ ಮಾತನಾಡಿ, ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂತಹ ಒಳ್ಳೆಯ ಕೆಲಸ ನಡೆದಿರುವುದು ನಮ್ಮೆಲ್ಲರ ಪುಣ್ಯ. ಈ ಕೆರೆಯನ್ನು ಇನ್ನು ಮುಂದೆ ಉತ್ತಮವಾಗಿ ನಿರ್ವಹಣೆ ಮಾಡುವುದು ನಮ್ಮೆಲರ ಹೊಣೆ ಎಂದು ತಿಳಿಸಿದರು.
ಕೆರೆಯ ಸುತ್ತ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೆರೆ ಇಂಜಿನಿಯರ್‌ಗಳಾದ ಪುಷ್ಪರಾಜ್, ಯೋಜನಾಧಿಕಾರಿ ಸುಜಾತಾ, ಕೆರೆ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಗ್ರಾಪಂ ಸದಸ್ಯರು, ಊರಿನ ಪ್ರಮುಖರು ಇದ್ದರು.