ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿರುವ ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು. ಹುಲುಮನಿ ತಿಮ್ಮಣ್ಣ, ಸುಪ್ರೀತಾ, ಮಹೇಶ್ವರಪ್ಪ, ಗಂಗಾಧರ್, ಮಧುಸೂದನ್, ಪುಷ್ಪಾ, ನಟರಾಜ್ ಇತರರು ಇದ್ದರು.
ಸಕಲೇಶಪುರ: ಪ್ರಕೃತಿ ಇರುವೆಡೆ ಸೌಂದರ್ಯ ಇರುತ್ತದೆ. ಊರಿನ ಸೌಂದರ್ಯವನ್ನು ಹೆಚ್ಚಿಸಬೇಕಾದರೆ ಹಸಿರನ್ನು ಹೆಚ್ಚಿಸಬೇಕು. ಸಸಿಗಳನ್ನು ಬೆಳೆಸುವುದು ಪರಿಸರ ರಕ್ಷಣೆ ಮೊದಲ ಹೆಜ್ಜೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ಮಳಲಿ ಗ್ರಾಮದಲ್ಲಿರುವ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪುರಸಭಾ ಕಾರ್ಯಾಲಯ, ಜಿಲ್ಲಾಡಳಿತ ಹಾಸನ, ಸಕಲೇಶಪುರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಕಲೇಶಪುರದಲ್ಲಿ ಜನಿಸಿರುವುದು ನಮ್ಮೆಲ್ಲರ ಪುಣ್ಯ. ಇತರ ತಾಲೂಕುಗಳಿಗೆ ಹೋಲಿಸಿದರೆ ಹಚ್ಚಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಬದುಕುವ ಅವಕಾಶ ಸಿಕ್ಕಿದೆ. ಇದೇ ಕಾರಣಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಜನರು ಸಕಲೇಶಪುರದ ಪ್ರಕೃತಿಯನ್ನು ಸವಿಯಲು ಬರುತ್ತಾರೆ. ಅಷ್ಟರ ಮಟ್ಟಿಗೆ ಸಕಲೇಶಪುರ ಪ್ರಕೃತಿ ಸಂಪತ್ತಿನಿಂದ ಕೂಡಿದೆ ಎಂದು ತಿಳಿಸಿದರು.
ಆದರೆ, ಇತ್ತೀಚಿನ ವರ್ಷಗಳಲ್ಲಿ ವಿವಿಧ ಯೋಜನೆಗಳು ಹಾಗೂ ಅಭಿವೃದ್ಧಿ ಚಟುವಟಿಕೆಗಳಿಂದ ಕೆಲವೆಡೆ ಪ್ರಕೃತಿಗೆ ಧಕ್ಕೆ ಉಂಟಾಗುತ್ತಿದೆ. ಇದನ್ನು ನಿರ್ಲಕ್ಷ್ಯ ಮಾಡಬಾರದು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವುದು ನಮ್ಮೆಲ್ಲರ ಜವಾಬ್ದಾರಿ ನಾವು ಇನ್ನಷ್ಟು ಉತ್ತಮ ಪರಿಸರ ಕೊಟ್ಟು ಹೋಗುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಕಣ್ಣೆದುರಿನಲ್ಲಿರುವ ಪ್ರಕೃತಿಯನ್ನಾದರೂ ಉಳಿಸಿಕೊಂಡು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಸಕಲೇಶಪುರ ತಾಲೂಕಿನಲ್ಲಿ 26 ಗ್ರಾಮ ಪಂಚಾಯಿತಿಗಳಲ್ಲಿ ತಲಾ 2 ಸಾವಿರ ಗಿಡಗಳನ್ನು ನೆಡುವ ಮೂಲಕ ಸುಮಾರು 52 ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಸಕಲೇಶಪುರದಲ್ಲಿ ಟ್ರೀ ಪಾರ್ಕ್ ನಿರ್ಮಿಸುವ ಆಶಯ ಹೊಂದಿದ್ದೇನೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ ಮಾತನಾಡಿ, ಪರಿಸರ ನಾಶ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಆಮ್ಲಜನಕ ಸಿಲಿಂಡರ್ ಹಾಗೂ ಮಾಸ್ಕ್ ನೀಡಿ ಸ್ವಾಗತಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿದರು.
ತಹಸೀಲ್ದಾರ್ ಸುಪ್ರೀತಾ ಮಾತನಾಡಿ, ತಾಲೂಕಿನ ಹಚ್ಚಹಸಿರು ಪರಿಸರವೇ ಮಲೆನಾಡಿನ ಜೀವನಾಡಿಯಾಗಿದ್ದು, ಕಾಡುಗಳಿರುವುದರಿಂದಲೇ ಮಳೆ, ನೀರು ಹಾಗೂ ಅನೇಕ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯ ಪೂರೈಕೆಯಾಗುತ್ತಿದೆ. ಎತ್ತಿನಹೊಳೆ ಯೋಜನೆ ಪರಿಸರಕ್ಕೆ ಕನಿಷ್ಠ ಹಾನಿಯಾಗುವ ರೀತಿಯಲ್ಲಿ ಅನುಷ್ಠಾನಗೊಂಡ ಯೋಜನೆಗಳಲ್ಲಿ ಒಂದಾಗಿದೆ ಎಂದರು.
ತಾಲೂಕಿನಲ್ಲಿ 50 ಸಾವಿರ ಸಸಿ ನೆಡುವ ಉದ್ದೇಶವನ್ನು ಇಟ್ಟುಕೊಂಡಿದ್ದು ಶಾಪ್ ಸಿದ್ದೇಗೌಡ ಶಾಲೆ ಸೇರಿದಂತೆ ವಿವಿಧಡೆ ಹಲವು ಸಸಿಗಳನ್ನು ನೆಡಲಾಯಿತು ಮತ್ತು ಪರಿಸರ ಸಂರಕ್ಷಣೆಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ, ತಾಪಂ ಇ.ಒ.ಗಂಗಾಧರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಧುಸೂದನ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ಪುರಸಭಾ ಅಧಿಕಾರಿ ನಟರಾಜ್ ಇತರರು ಇದ್ದರು.