ಸಕಲೇಶಪುರ: ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿ ಕಟ್ಟಡ ಭಾನುವಾರ ಕುಸಿದು ಬಿದ್ದಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ಕಟ್ಟಡ ಶಿಥಿಲಗೊಂಡಿತ್ತು. ಕಟ್ಟಡದಲ್ಲಿ ಐವರು ಕಾಯಂ ಸಿಬ್ಬಂದಿ ಹಾಗೂ ಇಬ್ಬರು ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದರು.
ಶನಿವಾರ ಕಚೇರಿಗೆ ಟೀ ನೀಡಲು ಬಂದಿದ್ದ ಆದಮ್ ಎಂಬುವರು ಕಟ್ಟಡ ಕುಸಿಯುವ ಹಂತದಲ್ಲಿದ್ದು ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಬ್ಬಂದಿ ಶನಿವಾರ ಸಂಜೆಯೇ ಕಚೇರಿಯ ಪ್ರಮುಖ ಕಡತಗಳು ಹಾಗೂ ದಾಖಲೆಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು.
ಭಾನುವಾರ ಮಧ್ಯರಾತ್ರಿ ಕಟ್ಟಡ ಸಂಪೂರ್ಣ ನೆಲಸಮವಾಗಿದೆ.
ಕಚೇರಿ ತೆರೆಯುವ ಮುನ್ನವೇ ಕಟ್ಟಡ ಕುಸಿದಿರುವುದು ಸಂಭವಿಸಬಹುದಾಗಿದ್ದ ಭಾರಿ ದುರಂತ ತಪ್ಪಿದಂತಾಗಿದೆ.
ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.