ಆರೋಗ್ಯ ಕೇಂದ್ರಕ್ಕೆ 1.50 ಕೋಟಿ ರೂ. ಅನುದಾನ

ಪಟ್ಟಣದ ಉಯ್ಯಲೆ ಕಂಬದ ಹತ್ತಿರ ಕಾಂಕ್ರಿಟ್ ನಿರ್ಮಾಣದ ರಸ್ತೆಗೆ ಸೋಮವಾರ ಶಾಸಕ ಸಿಎನ್ ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು
ಪಟ್ಟಣದ ಉಯ್ಯಲೆ ಕಂಬದ ಹತ್ತಿರ ಕಾಂಕ್ರಿಟ್ ನಿರ್ಮಾಣದ ರಸ್ತೆಗೆ ಸೋಮವಾರ ಶಾಸಕ ಸಿಎನ್ ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿಕೆ
  • ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
ಹಿರೀಸಾವೆ: ಪ್ರವಾಸಿ ಮಂದಿರ ನಿರ್ಮಿಸಲು 2 ಕೋಟಿ ರೂ.ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಹಿರೀಸಾವೆ ಗ್ರಾಮದ ಉಯ್ಯಲೆ ಕಂಬದ ಬೀದಿಯಲ್ಲಿ 1 ಕೋಟಿ ರೂ.ವೆಚ್ಚದ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸಮುದಾಯ ಆರೋಗ್ಯ ಕೇಂದ್ರದ ಅಭಿವೃದ್ಧಿಗೆ 1.50 ಕೋಟಿ ರೂ. ಅನುದಾನ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಗ್ರಾಮದ ಪರಿಮಿತಿಯಲ್ಲಿ 5.65 ಕೋಟಿ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣ, 2 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ, ಮಾಜಿ ಶಾಸಕ ದಿ.ಎನ್.ಗಂಗಾಧರ್ ಅವರ ಹೆಸರಿನಲ್ಲಿ ನಿರ್ಮಿಸಿರುವ ಕ್ರೀಡಾಂಗಣವನ್ನು 20 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಹೆಚ್ಚಿನ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮದ ದೊಡ್ಡ ಕೆರೆಯ ಏರಿ ದುರಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶ್ರೀಕಂಠಯ್ಯ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಶ್ರವಣ ಬೆಳಗೊಳ ಮುಖ್ಯರಸ್ತೆ ಬದಿಯಲ್ಲಿ ಬಸ್ ತಂಗುದಾಣ ನಿರ್ಮಿಸಲು ಈಗಾಗಲೇ ಚಾಲನೆ ನೀಡಲಾಗಿದೆ. ತಾಲೂಕು ಕೇಂದ್ರದ ಮಟ್ಟಕ್ಕೆ ಬೆಳೆಯುತ್ತಿರುವ ಹಿರೀಸಾವೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ಪರಮದ ದೇವರಾಜೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಅನಿಲ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಎಸ್.ರವಿಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ್, ನಿರ್ದೇಶಕ ಹಿಂದ್ಲಟ್ಟಿ ಬೋರೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್, ಮಾಜಿ ಅಧ್ಯಕ್ಷ ಬೋರಣ್ಣ, ಸದಸ್ಯೆ ವೇದಾವತಿ ಮಂಜುನಾಥ್, ಪ್ರಮುಖರಾದ ವೆಂಕಟೇಶ್, ಮಂಜುನಾಥ್, ರೋಡ್ ಮಂಜು, ಹೋಟೆಲ್ ಲೋಕೇಶ್, ಪಿಚ್ಚರ್ ಅಣ್ಣಯ್ಯಪ್ಪ ಬಾಬು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net