ವಳಗೆರಹಳ್ಳಿ ಗ್ರಾಮದ ವ್ಯಾಪ್ತಿಯ ಬಡಾವಣೆಗಳಿಗೆ ನಿರಂತರ ವಿದ್ಯುತ್ ಸೌಕರ್ಯ ಕಲ್ಪಿಸುವ ಕಾಮಗಾರಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ವೆಂಕಟೇಶ್, ಪ್ರದೀಪ್, ಜಯರಾಮ್, ಸಾಗರ್ ಗೌಡ, ಮಂಜುನಾಥ್, ಗಿರೀಶ್, ಅಶೋಕ್, ಬೋರೇಗೌಡ, ಸಂಪತ್ ಕುಮಾರ್ ಇದ್ದರು.
ಬಾಗೂರು: ತಾಲೂಕಿಗೆ ನಿರಂತರ ವಿದ್ಯುತ್ ಸೌಲಭ್ಯ ಕಲ್ಪಿಸಲು ಸರ್ಕಾರದಿಂದ 10 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಹೋಬಳಿಯ ವಳಗೇರಹಳ್ಳಿ ಬಡಾವಣೆಗಳಿಗೆ ನಿರಂತರ ವಿದ್ಯುತ್ ಸೌಕರ್ಯ ಕಲ್ಪಿಸುವ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನಲ್ಲೇ ವಳಗೇರಹಳ್ಳಿ ದೊಡ್ಡ ಹಳ್ಳಿಯಾಗಿದ್ದು ಎಲ್ಲ ಬಡಾವಣೆಗಳಿಗೂ ನಿರಂತರ ವಿದ್ಯುತ್ ಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿ ಅಧಿಕೃತವಾಗಿ 60 ಸಾವಿರ ರೈತರ ಕೊಳವೆಬಾವಿಗಳಿವೆ. ಅನಧಿಕೃತವಾದ 6 ಸಾವಿರ ಕೊಳವೆಬಾವಿಗಳಿಗೆ ರೈತರು ನೋಂದಣಿಗೆ ಹಣ ಕಟ್ಟಿ ಸಕ್ರಮ ಮಾಡಿಕೊಳ್ಳಿ. ಟ್ರಾನ್ಸ್‌ಫಾರ್ಮರ್‌ಗಳು ಸುಡದಂತೆ ಎಚ್ಚರ ವಹಿಸಬೇಕು. ತಾಲೂಕಿನ ರೈತರ ಕೊಳವೆಬಾವಿಗಳ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟರೆ 24 ಗಂಟೆ ಒಳಗೆ ಹಾಕಿಸಲಾಗುತ್ತಿದೆ. ತಾಲೂಕಿನ ರೈತರ ಹಿತದೃಷ್ಟಿಯಿಂದ ಕಲ್ಕೆರೆ ಹತ್ತಿರ 220 ಕೆವಿ ರಿಸೀವಿಂಗ್ ಸ್ಟೇಷನ್ ಸ್ಥಾಪನೆಗೆ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 2ನೇ ದೊಡ್ಡ ಕೆರೆಯಾಗಿರುವ ಅಣತಿ ಕೆರೆಗೆ ಹೇಮಾವತಿ ನದಿ ನೀರು ಹರಿಸಲು 60 ಲಕ್ಷ ರೂ. ಹಾಗೂ ನಿಂಗಳಅಕ್ಕನ ಕೆರೆ ತುಂಬಿಸುವ ಮೋಟರ್ ಅಳವಡಿಸಲು 25 ಲಕ್ಷ ರೂ. ನೀಡಿದ್ದೇನೆ. ಇದರಿಂದ ಈ ಭಾಗದ ತೆಂಗು ಬೆಳೆ ಉಳಿಸಲು ಅಂತರ್ಜಲ ಅಭಿವೃದ್ಧಿಯಾಗಿದೆ ಎಂದರು.
ನವಿಲೇ ಏತ ನೀರಾವರಿ ಯೋಜನೆಯನ್ನು ಬಲವರ್ಧನೆಗೊಳಿಸಿ ಬಿದರೆ, ಕೆಂಬಾಳು, ಬಳಗಟ್ಟೆ, ಶಿವರ, ತಗಡೂರು ಸೇರಿದಂತೆ ಬಾಗೂರು ಹೋಬಳಿಯ ಎಲ್ಲ ಕೆರೆಗಳಿಗೆ ಹೇಮಾವತಿ ನದಿ ನೀರು ತುಂಬಿಸಲಾಗಿದೆ. ಇದರಿಂದ ಕೊಳವೆ ಬಾವಿಗಳ ಅಂತರ್ಜಲ ವೃದ್ಧಿಯಾಗಿ. ರೈತರ ಕೃಷಿ ಬದುಕಿಗೆ ಕೊಳವೆ ಬಾವಿಗಳನ್ನು ಕೊರೆಸಲು ಬಡ್ಡಿ ಸಾಲ ಮಾಡಬೇಕಾದ ಪರಿಸ್ಥಿತಿ ಈ ವರ್ಷದಲ್ಲಿ ಕಾಣುತ್ತಿಲ್ಲ ಎಂದು ತಿಳಿಸಿದರು.
ಬೀರಲಿಂಗೇಶ್ವರ ಸ್ವಾಮಿ ದೇಗುಲದ ರಸ್ತೆಯ ಪಿಕಪ್ ನಿರ್ಮಾಣಕ್ಕೆ 1 ಕೋಟಿ ರೂ. ಬಿಡುಗಡೆಯಾಗಿದೆ. ವಳಗೆರೆಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 250 ಹಸುಗಳ ಮ್ಯಾಟ್ ಕೊಡಿಸಲಾಗಿದೆ. ಆಂಜನೇಯ ಸ್ವಾಮಿ ದೇಗುಲದ ಜೀರ್ಣೋದ್ಧಾರಕ್ಕೆ 5 ಲಕ್ಷ ರೂ. ನೀಡಲಾಗಿದೆ. ಭೈರವೇಶ್ವರಸ್ವಾಮಿ ದೇಗುಲದ ರಸ್ತೆ, ಗ್ರಾಮದ ಉತ್ತರ ಬಡಾವಣೆ ರಸ್ತೆ ಮಾಡಿಸುವ ಭರವಸೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಸಾಗರ್‌ಗೌಡ, ಬೋರೇಗೌಡ, ಅಶೋಕ್, ಗಿರೀಶ್, ಚಿಕ್ಕೇಗೌಡ, ಎಚ್.ಪಿ.ಸಂಪತ್‌ಕುಮಾರ್, ಈಶಣ್ಣ, ಶಂಬಣ್ಣ, ಹಿಂಡಲೇಗೌಡ, ಗುತ್ತಿಗೆದಾರ ಜಯರಾಮ್, ಇಂಜಿನಿಯರ್‌ಗಳಾದ ವೆಂಕಟೇಶ್, ಪ್ರದೀಪ್ ಇತರರು ಇದ್ದರು.