ಹಾಳಾಗಿದೆ ಕೀತೂರು ಗ್ರಾಮದ ರಸ್ತೆ

ಬೇಲೂರು ತಾಲೂಕಿನ ಕೀತೂರು-ಕುಡುಮನಹಳ್ಳಿ-ಮಗೇಹಳ್ಳಿ ಗ್ರಾಮಕ್ಕೆ ತೆರಳುವ  ರಸ್ತೆ ಸಂಪೂರ್ಣ ಗುಂಡಿ ಬಿದ್ದು ಹಾಳಾಗಿರುವುದು.
ಬೇಲೂರು ತಾಲೂಕಿನ ಕೀತೂರು-ಕುಡುಮನಹಳ್ಳಿ-ಮಗೇಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಗುಂಡಿ ಬಿದ್ದು ಹಾಳಾಗಿರುವುದು.
Published on

ಬಿ.ಎಲ್.ಲಕ್ಷ್ಮಣ್ ಬೇಲೂರು

ತಾಲೂಕಿನ ದಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೀತೂರು ಗ್ರಾಮದ ಸಂಪರ್ಕ ರಸ್ತೆ ಗುಂಡಿ ಬಿದ್ದು ಹಾಳಾಗಿದೆ. ಮಳೆಗಾಲವಾದ ಕಾರಣ ಗುಂಡಿಗಳಲ್ಲಿ ನೀರು ನಿಂತು ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಕಳೆದ ಎರಡು ದಶಕಗಳಿಂದಲೂ ಇದೇ ಸಮಸ್ಯೆ ಇದ್ದರೂ ಸಂಬಂಧಿಸಿದ ಅಧಿಕಾರಿಗಳು, ಜನ ಪ್ರತಿನಿಧಿಗಳು ಕ್ರಮ ವಹಿಸಿಲ್ಲ. ತಕ್ಷಣವೇ ರಸ್ತೆ ದುರಸ್ತಿಗೆ ಮುಂದಾಗಬೇಕೆಂದು ಕೀತೂರು- ಕುಡುಮನಹಳ್ಳಿ-ಮಗೇಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೇಲೂರು ತಾಲೂಕಿನ ಮಲೆನಾಡು ಭಾಗದ ಅರೇಹಳ್ಳಿ ಹೋಬಳಿಗೆ ಸೇರಿದ ಕೀತೂರು ಗ್ರಾಮಕ್ಕೆ
ಸಾಗುವುದೇ ದುಸ್ತರವಾಗಿದೆ. ಗೆಂಡೇಹಳ್ಳಿ ಸಮೀಪದ ಬೇಲೂರು-ಮೂಡಿಗೆರೆಯಿಂದ ಮುಖ್ಯರಸ್ತೆ ಮೂಲಕ ಕೀತೂರು ಕುಡುಮನಹಳ್ಳಿ, ಮಗೇಹಳ್ಳಿ ಗ್ರಾಮಕ್ಕೆ ತೆರಳುವ ಸಂಪರ್ಕ ರಸ್ತೆ ಯಾತನಾಮಯವಾಗಿದೆ.
ಈ ಗ್ರಾಮಗಳಿಗೆ ಜನರು ತೆರಳಲು ಇದೊಂದೇ ರಸ್ತೆ ಇರುವುದರಿಂದ 4 ಕಿಲೋ ಮೀಟರ್
ಕ್ರಮಿಸು ವುದು ಸವಾಲಾಗಿದೆ. ಈ ಮಾರ್ಗದಲ್ಲಿ ಹೇಳ ತೀರದಷ್ಟು ಗುಂಡಿ ಬಿದ್ದು ನೀರು ನಿಂತು ಕೆಸರು ಮಯವಾಗಿದೆ. ಗ್ರಾಮದ ಸಮೀಪವಿರುವ ಕೀತೂರು ಜಲಾಶಯಕ್ಕೆ ತೆರಳಲು ಈ ರಸ್ತೆಯನ್ನು ಬ್ರಿಟಿಷರ ಕಾಲದಲ್ಲೇ ನಿರ್ಮಿಸಲಾಗಿತ್ತು. ನಂತರದಲ್ಲಿ ರಸ್ತೆ ಶಿಥಿಲವಾಗಿದ್ದರಿಂದ ಎಚ್.ಡಿ.ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಗ್ರಾಮಸ್ಥರ ಪರವಾಗಿ ಮುಖಂಡ ಕೀತೂರು ಗ್ರಾಮದ ಶೇಷೇಗೌಡ ರಸ್ತೆ ಅಭಿವೃದ್ಧಿ ಮಾಡಿಸಿ ಎಂದು ಪತ್ರ ಬರೆದಿದ್ದರು. ಕೇವಲ ಎಂಟು ದಿನದಲ್ಲೇ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿ ಕೈಗೊಳ್ಳಲು ದೇವೇಗೌಡರು ನೆರವಾಗಿದ್ದರು. ಆಗ ಉತ್ತಮ ರಸ್ತೆ ಭಾಗ್ಯ ಜನರಿಗೆ ದೊರಕಿತ್ತು.
ಆದಾದ ನಂತರದ 20 ವರ್ಷಗಳಾದರೂ ಈ ರಸ್ತೆ ನಿರ್ವಹಣೆಗೆ ಯಾರೂ ಗಮನ ನೀಡದ ಕಾರಣ ಈ ದುಸ್ಥಿತಿ ಎದುರಾಗಿದೆ. ಗುಂಡಿಗಳಿಂದ ತುಂಬಿದ ಮಾರ್ಗದಲ್ಲಿ ಜನ, ಜಾನುವಾರುಗಳು ಓಡಾಡದ ಸ್ಥಿತಿ ನಿರ್ಮಾಣವಾಗಿದೆ.
ಜನರ ಆಗ್ರಹದ ಮೇರೆಗೆ ಕಳೆದ ಮೂರು ವರ್ಷಗಳ ಹಿಂದೆ ಕೇವಲ 700 ಮೀಟರ್ ರಸ್ತೆ ಅಭಿವೃದ್ಧಿ ಪಡಿಸಿ ಅಲ್ಲಲ್ಲಿ ಗುಂಡಿಗಳಿಗೆ ಮಣ್ಣು ಹಾಕಿದ್ದು ಬಿಟ್ಟರೆ ಬೇರೆ ಯಾವ ಕಾಮಗಾರಿಗೂ ಅಧಿಕಾರಿಗಳು ಮುಂದಾಗಲೇ ಇಲ್ಲ.ನಾಲ್ಕೈದು ವರ್ಷಗಳಿಂದ ಮಳೆ, ಗಾಳಿ, ವಾಹನ ಸಂಚಾರದಿಂದ ಈ ರಸ್ತೆಯಲ್ಲಿದ್ದ ಕಲ್ಲು, ಮಣ್ಣೆಲ್ಲಾ ಕೊಚ್ಚಿ ಹೋಗಿದೆ.
*
ತುರ್ತು ಸಂದರ್ಭದಲ್ಲಿ ಸಂಚಾರ ಯಾತನಾಮಯ
ಕೀತೂರು-ಕುಡುಮನಹಳ್ಳಿ-ಮಗೇಹಳ್ಳಿ ಗ್ರಾಮದ ರಸ್ತೆಯಲ್ಲಿ ಜನರಿರಲಿ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ವಾಹನಗಳೂ ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಸಮಯದಲ್ಲಂತೂ ಸಂಚಾರ ಮಾಡುವ ಸಾರ್ವಜನಿಕರ ಪಾಡು ಹೇಳುವುದೇ ಬೇಡ. ಹೆಜ್ಜೆ ಹೆಜ್ಜೆಗೂ ಗುಂಡಿ, ಗಟಾರ. ರಸ್ತೆಯಲ್ಲಿ ಬೈಕ್ ಸವಾರರು ಹಾಗೂ ಆಟೋರಿಕ್ಷಾದಲ್ಲಿ ಸಾಗುತ್ತಿರುವವರು ಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ. ಈ ಗ್ರಾಮದ ನಿವಾಸಿಗಳಲ್ಲಿ ಯಾರಿಗಾದರೂ ಕಾಯಿಲೆ ಅಥವಾ ಇನ್ನಿತರೆ ತುರ್ತು ಚಿಕಿತ್ಸೆಗೆಂದು ತಾಲೂಕು ಕೇಂದ್ರದ ಆಸ್ಪತ್ರೆಗೆ ಕರೆ ತರಬೇಕೆಂದರೆ ಯಾವುದೇ ವಾಹನಗಳು ಗ್ರಾಮಕ್ಕೆ
ಬರುವುದಕ್ಕೆ ಹಿಂದೇಟು ಹಾಕುತ್ತಾರೆ. ಂದು ಪಕ್ಷ ಬರುವುದಾದರೆ ದುಬಾರಿ ಹಣ ಕೇಳುತ್ತಾರೆ. ಇದೇ ರಸ್ತೆಯಲ್ಲೆ ಬೇಲೂರು-ಮೂಡಿಗೆರೆ ಪಟ್ಟಣದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಇನ್ನಿತರೆ ಕೆಲಸ ಕಾರ್ಯಗಳಿಗೆ ಹೋಗುವ ರೈತರು, ವಯೋ ವೃದ್ಧರು, ಮಹಿಳೆಯರು, ಮಕ್ಕಳು ಗುಂಡಿ ಹಾಗೂ ಕೆಸರುಮಯ ಮಾರ್ಗದಲ್ಲಿ ಹರ ಸಾಹಸ ಪಟ್ಟುಕೊಂಡೇ ಓಡಾಡ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾರ್ಥಿಗಳು ಈ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುವ ಸಂದರ್ಭ ವಾಹನಗಳು ಬಂದರೆ ಕೆಸರು ನೀರು ಸಮವಸ್ತ್ರಗಳ ಮೇಲೆ ಬಿದ್ದು ಬಟ್ಟೆಗಳೆಲ್ಲ ಹೊಲಸಾಗುವ ಪ್ರಸಂಗ ದಿನವೂ ಕಾಣುತ್ತದೆ.
ಮಕ್ಕಳು ಅದೇ ಬಟ್ಟೆಯಲ್ಲೆ ಶಾಲೆಗೆ ಹೋಗುವಂತಾಗಿದೆ. ಜತೆಗೆ ಎಲ್ಲಿ ಯಾವಾಗ ಈ ದೊಡ್ಡ ಗುಂಡಿಗಳಿಂದ ಅನಾಹುತ ಸಂಭವಿಸುತ್ತದೆಯೋ ಎಂಬ ಆತಂಕ ವಾಹನ ಚಾಲಕರಿಗೆ
ಮನೆ ಮಾಡಿದೆ. ಈ ರಸ್ತೆ ಅಭಿವೃದ್ಧಿ ವಿಚಾರವಾಗಿ ಅಧಿಕಾರಿಗಳು, ಜನ ಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಜನರು. ಇಲ್ಲ ಸಲ್ಲದ ಸಬೂಬು ಹೇಳುವುದನ್ನು ಬಿಟ್ಟರೆ ರಸ್ತೆ ಅಭಿವೃದ್ಧಿಗೆ ಯಾವ ಅಧಿಕಾರಿಯೂ ಮುಂದಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಯಾವುದೇ ಅಪಘಾತ ಸಂಭವಿಸುವ ಮುನ್ನ ಅಧಿಕಾರಿಗಳು, ಶಾಸಕರು, ಜನ ಪ್ರತಿನಿಧಿಗಳು ಗಮನ ಹರಿಸಿ ಕೀತೂರೂ, ಕುಡುಮನಹಳ್ಳಿ, ಮಗೇಹಳ್ಳಿ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಬೇಕಿದೆ. 2 ದಶಕಗಳ ಸಮಸ್ಯೆಗೆ ಮುಕ್ತಿ ನೀಡಲು ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬಾಕ್ಸ್‌ನ್ಯೂಸ್: ))
ಕೀತೂರು-ಕುಡುಮನಹಳ್ಳಿ-ಮಗೇಹಳ್ಳಿ ಗ್ರಾಮದ ಸಂಪರ್ಕ ರಸ್ತೆಯಲ್ಲಿ ಓಡಾಡುವುದೆ ದೊಡ್ಡ ತಲೇ ನೋವಾಗಿದೆ. ನಡೆದು ಸಾಗುವಾಗ ಗುಂಡಿಗೆ ಬಿದ್ದು ಗಾಯಗೊಂಡರೆ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಜತೆಗೆ ಬೆಳಗ್ಗೆ, ಸಂಜೆ ದಿನನಿತ್ಯ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ ಇಲ್ಲಿ ಓಡಾಡುವಾಗ ವಾಹನಗಳು ಬಂದ ಸಂದರ್ಭ ನೀರೆಲ್ಲ ಮೈಮೇಲೆ ಬಿದ್ದು ಬಟ್ಟೆ ಎಲ್ಲ ಕೆಸರಿನಿಂದ ಕೂಡುವುದರಿಂದ ಶಾಲೆಗೆ ಹೋಗದೆ ಮನೆಗೆ ವಾಪಸ್ ಹೋಗ ಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳ ಮತ್ತು ಗ್ರಾಮಸ್ಥರ ಅನುಕೂಲಕ್ಕಾಗಿ ಇನ್ನಾದರೂ ರಸ್ತೆಯನ್ನು ಅಭಿವೃದ್ಧಿ ಮಾಡಲು ಅಧಿಕಾರಿಗಳು, ಜನ ಪ್ರತಿನಿಧಿಗಳು ಮುಂದಾಗುವರೇ ಎಂದು ಕಾದು ನೋಡಬೇಕಿದೆ.
**
ಬೇಲೂರು-ಮೂಡಿಗೆರೆ ಮುಖ್ಯರಸ್ತೆಯಿಂದ ಕೀತೂರು-ಕುಡುಮನಹಳ್ಳಿ-ಮಗೇಹಳ್ಳಿ ಗ್ರಾಮಕ್ಕೆ ತೆರಳುವ ನಡುವಿನ 4 ಕಿ.ಮೀ. ರಸ್ತೆ ಎಲ್ಲೆಂದರಲ್ಲಿ ಗುಂಡಿ ಬಿದ್ದು ನೀರು ನಿಂತಿದೆ. ಈ ರಸ್ತೆಯಲ್ಲಿ ಬೈಕ್ ಮತ್ತು ಆಟೋರಿಕ್ಷಾ ದವರು ಬಿದ್ದು ಗಂಭೀರವಾಗಿ ಗಾಯ ಗೊಂಡಿದ್ದಾರೆ. 20 ವರ್ಷಗಳ ಹಿಂದೆ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ನಾನು ಪತ್ರ ಬರೆದ 8 ದಿನಗಳಲ್ಲಿ ಉತ್ತರಿಸಿ, ಕೆಲವೇ ದಿನಗಳಲ್ಲಿ ಕೀತೂರು ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಿಸಿ ಕೊಟ್ಟಿದ್ದರು. ಅಂದಿನಿಂದ ಇಲ್ಲಿವರೆಗೆ ಯಾವುದೇ ಕಾಮಗಾರಿ ನಡೆದಿಲ್ಲ. ಈ ಭಾಗದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿ ರಸ್ತೆ ಅಭಿವೃದ್ಧಿ ಕೆಲಸ ಮಾಡಿಸಬೇಕು.
ಕೆ.ಬಿ. ಶೇಷೇಗೌಡ
ಗ್ರಾಪಂ ಮಾಜಿ ಸದಸ್ಯ, ಕೀತೂರು
*
ಬೇಲೂರು-ಮೂಡಿಗೆರೆ ರಸ್ತೆಯಿಂದ ಕೀತೂರು ಗ್ರಾಮಕ್ಕೆ ತೆರಳುವ ರಸ್ತೆ ಗುಂಡಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಗಾಗಿ ಈಗಾಗಲೇ ಎತ್ತಿನಹೊಳೆ ಯೋಜನೆಯಡಿ 80 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ಪ್ರಾರಂಭಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು. ಕೀತೂರು-ಕುಡುಮನಹಳ್ಳಿ-ಮಗೇಹಳ್ಳಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲು ಕ್ರಮ ವಹಿಸಲಾಗುವುದು. ಗ್ರಾಮಗಳಲ್ಲಿ ಇತರ ಅಭಿವೃದ್ಧಿ ಕಾಮಗಾರಿಗಳನ್ನೂ ಮಾಡಿಸಲು ಕ್ರಮ ಕೈಗೊಳ್ಳುವೆ.
ಎಚ್.ಕೆ.ಸುರೇಶ್
ಶಾಸಕ, ಬೇಲೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net