ಬೇಲೂರು ತಾಲೂಕಿನ ಬಾರೆಮನೆ ಮತ್ತು ಹಳೇ ಗೆಂಡೇಹಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಚಾಲನೆ ನೀಡಿದರು. ಬಿಜೆಪಿ ಮುಖಂಡ ಜಿ.ಕೆ.ಕುಮಾರ್, ಶೇಷೇಗೌಡ, ರಮೇಶ್, ಶಮಂತ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರ್ ಇತರರಿದ್ದರು.
ಬೇಲೂರು : ತಾಲೂಕಿನ ಮಲೆನಾಡು ಭಾಗದ ರಸ್ತೆಗಳು ಕಳೆದ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಬಂದ ಮಳೆಗೆ ಹೆಚ್ಚು ಶಿಥಿಲಗೊಂಡಿದ್ದು, ಇವುಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕಿನ ಕಳ್ಳೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರೆಮನೆ ಮತ್ತು ಹಳೇ ಗೆಂಡೇಹಳ್ಳಿ ಸಂಪರ್ಕ ರಸ್ತೆ
ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಬೇಲೂರು ವಿಧಾನಸಭಾ ಕ್ಷೇತ್ರ ಭೌಗೋಳಿಕವಾಗಿ ವಿಭಿನ್ನವಾಗಿದೆ. ಮಲೆನಾಡು, ಅರೆ ಮಲೆನಾಡು ಮತ್ತು ಬಯಲು ಪ್ರದೇಶವನ್ನು ಹೊಂದಿದೆ. ಇಂತಹ ಕ್ಷೇತ್ರದಲ್ಲಿ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಿಂದ ರಸ್ತೆಗಳು ಹಾಳಾಗಿವೆ.
ಕಳ್ಳೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರೆಮನೆ ಮತ್ತು ಹಳೇ ಗೆಂಡೇಹಳ್ಳಿ ಸಂಪರ್ಕ ರಸ್ತೆ ಕೆಸರು
ಮಯವಾಗಿದ್ದು, ಗ್ರಾಮಸ್ಥರು ರಸ್ತೆ ಅಭಿವೃದ್ಧಿಗೆ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಸದಾ ಮಳೆಯಿಂದ ಅವೃತ್ತವಾಗಿರುವ ಮಲೆನಾಡು ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆ ಕಾಡುತ್ತಿದೆ. ಈಗಾಗಲೇ ಕಾಡಾನೆಗಳ ದಾಳಿಯಿಂದ ಹಲವರು ಬೆಳೆ ನಷ್ಟ ಅನುಭವಿಸಿದ್ದಾರೆ. ಇದರ ನಡುವೆ ಮಳೆ ಕೈಕೊಟ್ಟಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಬಗ್ಗೆ ಸದ್ಯದಲ್ಲೇ ದೆಹಲಿಗೆ ನಿಯೋಗ ತೆರಳಿ ಕೇಂದ್ರ ಸಚಿವರಿಗೆ ಮನವರಿಕೆ ಮಾಡುವುದರೊಂದಿಗೆ ರೈತರಿಗೆ ಸೂಕ್ತ ಪರಿಹಾರ ಕೊಡಿಸಲು ಒತ್ತಾಯಿಸಲಾಗುವುದು ಎಂದರು.
ಬಿಜೆಪಿ ಮುಖಂಡ ಜಿ.ಕೆ.ಕುಮಾರ್ ಮಾತನಾಡಿ, ಮಲೆನಾಡಿನ ಗೆಂಡೇಹಳ್ಳಿ ಪ್ರಾಂತ್ಯದಲ್ಲಿ ಈಗಾಗಲೇ ಸಾಕಷ್ಟು ಕಾಮಗಾರಿ ಕೆಲಸಗಳನ್ನು ಶಾಸಕರು ಮಾಡಿದ್ದಾರೆ. ಕೆಲವು ಭಾಗದಲ್ಲಿ ಇನ್ನೂ ಕಾಮಗಾರಿ ಬಾಕಿ ಇದೆ. ಅವುಗಳ
ಪಟ್ಟಿ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನದೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಅವರು ಮಾಡಿಸಲಿ ಎಂದರು. ಮುಖಂಡರಾದ ಶೇಷೇಗೌಡ, ರಮೇಶ್, ಶಮಂತ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರ್ ಇತರರಿದ್ದರು.