ಏತ ನೀರಾವರಿ ಯೋಜನೆಗಳಿಗೆ ಮರುಜೀವ

ಆಲೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ, ವೈದ್ಯರ ನಿರ್ಲಕ್ಷೃದಿಂದ ಮೃತಪಟ್ಟ  ನವಿದ್ ಅಹಮದ್ ಶರೀಫ್ ಅವರ ಪುತ್ರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಗಣಕಯಂತ್ರ ಆಪರೇಟರ್ ಹುದ್ದೆಗೆ ಮಂಜೂರಾತಿ ಪತ್ರವನ್ನು ಶಾಸಕ ಸಿಮೆಂಟ್ ಮಂಜು ನೀಡಿದರು.
ಆಲೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ, ವೈದ್ಯರ ನಿರ್ಲಕ್ಷೃದಿಂದ ಮೃತಪಟ್ಟ ನವಿದ್ ಅಹಮದ್ ಶರೀಫ್ ಅವರ ಪುತ್ರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಗಣಕಯಂತ್ರ ಆಪರೇಟರ್ ಹುದ್ದೆಗೆ ಮಂಜೂರಾತಿ ಪತ್ರವನ್ನು ಶಾಸಕ ಸಿಮೆಂಟ್ ಮಂಜು ನೀಡಿದರು.
Published on
ಆಲೂರು: ಏತ ನೀರಾವರಿ ಯೋಜನೆಗೆ ಮರು ಜೀವ ನೀಡುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಸಮಿತಿ ರಚನೆ ಮಾಡಿದ್ದು, ಶೀಘ್ರದಲ್ಲಿ ಸ್ಥಗಿತ ಗೊಂಡಿರುವ ಯೋಜಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಶುಕ್ರವಾರ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ತ್ರೈ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ನೀರಿಗೆ ಬರವಿಲ್ಲ, ತಾಂತ್ರಿಕ ಸಮಸ್ಯೆ ತೊಂದರೆ ಹಾಗೂ ನಿರ್ವಹಣೆ ಇಲ್ಲದೆ ಏತ ನೀರಾವರಿ ಯೋಜನೆ ಸ್ಥಗಿತಗೊಂಡಿದೆ. ಸರ್ಕಾರ ರಚಿಸಿರುವ ನೂತನ ಸಮಿತಿಯಲ್ಲಿ ನಾನು ಸದಸ್ಯನಾಗಿದ್ದು, ಪ್ರತಿ ಸಭೆಯಲ್ಲಿ ಕ್ಷೇತ್ರದ ನೀರಾವರಿ ಸಮಸ್ಯೆ ಕುರಿತು ನಿರಂತರವಾಗಿ ಬೆಳಕು ಚೆಲ್ಲುತ್ತಿದ್ದೆ ಎಂದರು.

ತಾಲೂಕಿನಲ್ಲಿರುವ ಏತ ನೀರಾವರಿ ಯೋಜನೆಗಳು ಚಾಲನೆಗೊಳ್ಳಲು ಸಮಸ್ಯೆಗಳು ಏನು ಎಂದು ಶಾಸಕರು ಅಧಿಕಾರಿಗಳಿಗೆ ಪ್ರಶ್ನಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ರಾಮೇನಹಳ್ಳಿ, ಹೊಸಪುರ ಏತ ನೀರಾವರಿ ಘಟಕದಲ್ಲಿ ಶೇ.90 ರಷ್ಟು ಕಾಮಗಾರಿ ಮುಗಿದಿದೆ. ವಿದ್ಯುತ್ ಸಂಪರ್ಕ ನೀಡಿದರೆ ಚಾಲನೆ ನೀಡಬಹುದು ಎಂದರು.
ಇನ್ನು 15 ದಿನದ ಒಳಗಾಗಿ ಏತ ನೀರಾವರಿ ಯೋಜನೆ ಘಟಕ ಕಾರ್ಯ ನಿರ್ವಹಿಸಬೇಕು. ಅದಕ್ಕೆ ಬೇಕಾದ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ವಾಟೆಹೊಳೆ ಮತ್ತು ಯಗಚಿ ಅಣೆಕಟ್ಟಿನಿಂದ ಹರಿಯುವ ವಿತರಣೆ ನಾಲೆಗಳು ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಗೊಂಡಿದ್ದು, ನಾಲೆಗಳನ್ನು ಪುನಃಶ್ಚೇತನಗೊಳಿಸಿದರೆ ಸುಮಾರು 18 ಸಾವಿರ ಎಕರೆ ಪ್ರದೇಶಕ್ಕೆ ನೀರು ಒದಗಿಸಬಹುದು. ಈ ಬಗ್ಗೆ ಇಂಜಿನಿಯರ್‌ಗಳು ನಾಲೆಗಳ ಪುನಃಶ್ಚೇತನಕ್ಕೆ ಬೇಕಾದ ಅನುದಾನಕ್ಕಾಗಿ ಅಂದಾಜು ಪಟ್ಟಿ ತಯಾರಿಸುವಂತೆ ಶಾಸಕರು ಸೂಚನೆ ನೀಡಿದರು.

ಸೌಜನ್ಯದಿಂದ ನಡೆದುಕೊಳ್ಳಿ:
ಸರ್ಕಾರಿ ಕಚೇರಿಗಳಿಗೆ ಭೇಟಿನೀಡುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ. ಸಣ್ಣಪುಟ್ಟ ಕೆಲಸಗಳಿಗೂ ಜನರು ತಿಂಗಳುಗಟ್ಟಲೆ ತಹಸೀಲ್ದಾರ್ ಕಚೇರಿ ಅಲೆದಾಡಬೇಕಿದೆ. ಅಧಿಕಾರಿಗಳು ಜನಸಾಮಾನ್ಯರಿಗೆ ಸತಾಯಿಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸರ್ಕಾರಿ ಭೂಮಿ ಸಂರಕ್ಷಿಸುವತ್ತ ಅಧಿಕಾರಿಗಳು ಆಸಕ್ತಿ ವಹಿಸಿಬೇಕು. ಭೂ ಕಬಳಿಕೆ ನಿರಂತರವಾಗಿ ನಡೆದಿದ್ದು, ಭೂ ಕಬಳಿಕೆ ಆಗದಂತೆ ತಡೆಯುವುದು ಅತೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡುವುದು ಅಥವಾ ಭೂ ಕಬಳಿಕೆ ಆಗದಂತೆ ಗಮನಹರಿಸುವುದು ವಿವಿಧ ಇಲಾಖೆಗಳ ಜವಾಬ್ದಾರಿಯಾಗಿದೆ. ಈ ಹಿಂದೆ ತಾಲೂಕಿನಲ್ಲಿ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಬಳಕೆಗೆಂದು ದಾನ ನೀಡಿರುವ ಜಾಗವನ್ನು ಸರ್ಕಾರ ಹೆಸರಿಗೆ ಖಾತೆ ಮಾಡಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಹೇಳಿದರು.

ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗಗಳನ್ನು ಅಧಿಕಾರಿಗಳು ಗುರುತಿಸಿ ಮಾಹಿತಿ ನೀಡಬೇಕು. ಸರ್ಕಾರಿ ಜಾಗಗಳಿದ್ದರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಹಾಯಕವಾಗುತ್ತದೆ ಎಂದರು.

ತೋಟಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಸಹಾಯಕ ನಿರ್ದೇಶಕರು ನೀಡಿದ ಅಸಮಂಜಸ ಮಾಹಿತಿಗಳ ಬಗ್ಗೆ ಶಾಸಕರು ಬೇಸರ ವ್ಯಕ್ತಪಡಿಸಿ, ಇಲಾಖೆಯ ವತಿಯಿಂದ ನೀಡುವ ಯೋಜನೆಗಳು ಜನರಿಗೆ ತಲುಪುತ್ತಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ನೀವು ನೀಡಿರುವ ಫಲಾನುಭವಿಗಳ ತೋಟಗಳಿಗೆ ಖುದ್ದು ತೆರಳಿ ಪರಿಶೀಲನೆ ಮಾಡುವುದಾಗಿ ಎಚ್ಚರಿಸಿದರು.

ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಬಡಮಕ್ಕಳಿಗೆ ಶಿಕ್ಷಣ ಕೊಡಲು ಸಾಧ್ಯ. ಇಲ್ಲದಿದ್ದರೆ ಶಿಕ್ಷಣ ಎಂಬುದು ಬಡವರ ಮಕ್ಕಳಿಗೆ ಗಗನ ಕುಸುಮವಾಗಲಿದೆ. ಆದ್ದರಿಂದ ಶಾಲೆಗಳ ಉಳುವಿಗೆ ಅಧಿಕಾರಿಗಳು ಶ್ರಮಿಸುವಂತೆ ತಿಳಿಸಿದರು.

ತಕ್ಷಣ ವಿದ್ಯುತ್ ಸಂಪರ್ಕ ನೀಡಿ:
ಕುಡಿಯುವ ನೀರಿಗೆ ಯಾವುದೇ ಅಡಚಣೆಯಾಗದಂತೆ ಅಧಿಕಾರಿಗಳು ಗಮನ ಹರಿಸಬೇಕು. ಬಾಕಿ ಇರುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಕುಡಿಯುವ ನೀರು ಒದಗಿಸಬೇಕು. ಬಿಲ್ ಪಾವತಿ ಮಾಡದಿರುವ ಗ್ರಾಮ ಪಂಚಾಯತಿ, ಅಂಗನವಾಡಿ, ಶಾಲೆಗಳಿಗೆ ವಿದ್ಯುತ್ ಸಂಪರ್ಕ ಕಡಿಗೊಳಿಸದೆ ಬಿಲ್ ಪಾವತಿಗೆ ಕ್ರಮ ವಹಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಗ್ರಾಮ ಪಂಚಾಯಿತಿಗಳ ಮೂಲಕ ಸಾರ್ವಜನಿಕರಿಗೆ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ನೀಡಲಾಗುತ್ತಿದೆಯೇ ಎಂಬ ಬಗ್ಗೆ ಶಾಸಕರು ಮಾಹಿತಿ ಕೇಳಿದರು.
ಮಂಜೂರಾತಿ ಪತ್ರ: ಇದೆ ವೇಳೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ, ವೈದ್ಯರ ನಿರ್ಲಕ್ಷಕ್ಕೆ ಮೃತಪಟ್ಟ ನವಿದ್ ಅಹಮದ್ ಶರೀಫ್ ಪುತ್ರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಗಣಕಯಂತ್ರ ಆಪರೇಟರ್ ಹುದ್ದೆಗೆ ಮಂಜೂರಾತಿ ಪತ್ರವನ್ನು ಶಾಸಕರು ನೀಡಿದರು.

ಈ ವೇಳೆ ತಹಸೀಲ್ದಾರ್ ಮಲ್ಲಿಕಾರ್ಜುನ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುಬ್ರಮಣ್ಯ ಶರ್ಮ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net