ಹೊಳೆನರಸೀಪುರ ಪಟ್ಟಣದ ಎಂಎಂಎಕೆ ಶಾಲೆಯ ಹಿರಿಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರು ವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಗೌರವಿಸಲಾಯಿತು. ಎಂ.ಜೆ. ಜವರಯ್ಯ, ಸುಶೀಲಮ್ಮ, ಜಯಲಕ್ಷ್ಮೀ, ಎಚ್.ಆರ್. ಜಯರಾಮ್, ಎಚ್.ಕೆ. ಸೋಮಶೇಖರ ಇತರರು ಇದ್ದರು.
ಹೊಳೆನರಸೀಪುರ: ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ನಾನಾ ಹುದ್ದೆಗಳಲ್ಲಿ ತೊಡಗಿಸಿಕೊಂಡಿರುವವರು ಜತೆಯಾಗಿ ಗುರುವಂದನಾ ಕಾರ್ಯಕ್ರಮ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಹೌಸಿಂಗ್ ಬೋರ್ಡ್ ವೃತ್ತದಲ್ಲಿರುವ ಪಿಆರ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಎಂಎಂಎಕೆ ಶಾಲೆಯಲ್ಲಿ ವ್ಯಾಸಂಗ ಮಾಡಿದ 1982-_83ನೇ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಶಾಲೆಯ ಶತಮಾನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂಬಂತೆ ಗುರುವಿಲ್ಲದೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳ ಸೌಭಾಗ್ಯವಂತರು. ಸರ್ಕಾರಿ ಶಾಲೆಯ ಶತಮಾನೋತ್ಸವವನ್ನು ಆಚರಿಸುತ್ತಿರುವುದು ಗುರು ಹಿರಿಯರ ಮೇಲಿರುವ ಗೌರವದ ಪ್ರತೀಕ ಎಂದರು.
ಹಲವು ದಶಕಗಳ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಸೌಲಭ್ಯಗಳಿರಲಿಲ್ಲ. ಈಗ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಿ ಉತ್ತಮ ಪ್ರಜೆಗಳಾಗಿ ರೂಪಿಸಲಿ ಎಂದು ಸಲಹೆ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕ ಡಿ.ಸಿ. ಮಹೇಶಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ನಗರದ ಹಾಗೂ ಸುತ್ತಮುತ್ತಲಿನ ಬಹುತೇಕ ವಿದ್ಯಾರ್ಥಿಗಳು ಇದೇ ಶಾಲೆಯಲ್ಲಿ ಓದಿ ದೊಡ್ಡ ದೊಡ್ಡ ಸಾಧನೆ ಮಾಡಿದ್ದಾರೆ. ರಾಜಕಾರಣಿಗಳಾಗಿ, ಸಮಾಜ ಸೇವಕರಾಗಿ, ಸರ್ಕಾರಿ ಹುದ್ದೆಗಳಲ್ಲಿ ವಿವಿಧ ರೀತಿಯ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಇದು ಇಡೀ ಶಾಲೆಗೆ ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಬುದ್ಧ ಪೂರ್ಣಿಮೆಯ ದಿನ ಅಂದರೆ ಶಾಂತಿಯ ದಿನ ಎಂದರ್ಥ. ಇಂದಿನ ದಿನವೇ ಕಾರ್ಮಿಕರ ದಿವಸವು ಹೌದು. ಕಾರ್ಮಿಕರು, ರೈತರಿಲ್ಲದೆ ಜೀವನ ಸಾಗಿಸಲು ಕಷ್ಟ. ಗುರು ಹಿರಿಯರ ಮೇಲೆ ಭಕ್ತಿ, ಪ್ರೀತಿ ವಾತ್ಸಲ್ಯ ಇರುವುದರಿಂದ ಗುರು ವಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದೀರಿ. ಇದೇ ಸಂಸ್ಕಾರವನ್ನು ಮುಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಲಿ ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಿರಿಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡರು. ಶಿಕ್ಷಕರಿಗೆ ಈ ಸಂದರ್ಭದಲ್ಲಿ ಕಾಣಿಕೆ ನೀಡಿ ಗೌರವಿಸಲಾಯಿತು.
ಗುರು ವೃಂದದವರಾದ ಎಂ.ಜೆ. ಜವರಯ್ಯ, ಸುಶೀಲಮ್ಮ, ಜಯಲಕ್ಷ್ಮೀ, ಎಚ್.ಟಿ.ನಾಗರತ್ನ, ಕೆ.ಕಾಳಮ್ಮ, ಕೃಷ್ಣಯ್ಯ, ಡಿ.ಸಿ. ಮಹೇಶಪ್ಪ, ಕೆ. ತಹಸೀನ್ ಇರ್ಫಾನ್, ಪ್ರೇಮ ಕುಮಾರ್, ಎಚ್.ಜೆ. ಕೃಷ್ಣಮೂರ್ತಿ ಇತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿಗಳಾದ ವಕೀಲ ಎಚ್.ಆರ್. ಜಯರಾಮ್, ಎಚ್.ಕೆ. ಸೋಮಶೇಖರ, ಎಚ್.ಆರ್. ಶ್ರೀರಾಮಚಂದ್ರ ಬಂಡಿ, ಎಚ್.ಟಿ. ಲಕ್ಷ್ಮಣ್, ಮಹಮ್ಮದ್ ಖಲೀಲ್, ಎಚ್.ಎಲ್. ಪುಷ್ಪಲತಾ, ಎಚ್.ಎಸ್. ಉಮಾದೇವಿ, ಎಚ್.ವಿ. ಶೋಭಾರಾಣಿ ಒಟ್ಟಾಗಿ ಆಯೋಜಿಸಿದ್ದರು.