ಎಸ್‌ಐಆರ್‌ನಲ್ಲಿ ಪ್ರತಿಯೊಬ್ಬರೂ ಹೆಸರನ್ನು ನೋಂದಾಯಿಸಿ

ಅರಕಲಗೂಡು ತಾಲೂಕಿನ ಹನ್ಯಾಳು ಸರ್ಕಾರಿ ಪ್ರೌಢಶಾಲಾ ಮಕ್ಕಳಿಂದ ಎಸ್‌ಐಆರ್ ಜಾಗೃತಿ ಅಭಿಯಾನ ನಡೆಯಿತು.
ಅರಕಲಗೂಡು ತಾಲೂಕಿನ ಹನ್ಯಾಳು ಸರ್ಕಾರಿ ಪ್ರೌಢಶಾಲಾ ಮಕ್ಕಳಿಂದ ಎಸ್‌ಐಆರ್ ಜಾಗೃತಿ ಅಭಿಯಾನ ನಡೆಯಿತು.
Published on
ಅರಕಲಗೂಡು: ರಾಜ್ಯ ಚುನಾವಣಾ ಆಯೋಗದ ವತಿಯಿಂದ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅಂಗವಾಗಿ ಹನ್ಯಾಳು ಗ್ರಾಮ ಪಂಚಾಯಿತಿ ಹಾಗೂ ದಿ.ಗೌರಮ್ಮ ಪುಟ್ಟಸ್ವಾಮಪ್ಪ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್ ಸಹಯೋಗದಲ್ಲಿ ಹನ್ಯಾಳು ಗ್ರಾಮದಲ್ಲಿ ಶನಿವಾರ ಜಾಗೃತಿ ಅಭಿಯಾನ ನಡೆಸಲಾಯಿತು.
ಅಭಿಯಾನದಲ್ಲಿ ಮಾತನಾಡಿದ ಜಿಲ್ಲಾ ಅತ್ಯುತ್ತಮ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆ.ಎನ್.ರವಿಕುಮಾರ, ಸಂವಿಧಾನ ನೀಡಿರುವ ಮತದಾನದ ಹಕ್ಕು ಪ್ರತಿಯೊಬ್ಬ ಪ್ರಜೆಯ ಪವಿತ್ರ ಕರ್ತವ್ಯವಾಗಿದ್ದು, 18 ವರ್ಷ ಪೂರೈಸಿದ ಪ್ರತಿಯೊಬ್ಬ ಅರ್ಹ ಭಾರತೀಯ ನಾಗರಿಕರು ತಮ್ಮ ಹೆಸರನ್ನು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಅಂಗವಾಗಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಲಿದ್ದು, ಅವರು ನೀಡುವ ಗಣತಿ ನಮೂನೆಗಳನ್ನು ಜುಲೈ 29ರೊಳಗೆ ಭರ್ತಿ ಮಾಡಿ ಸಲ್ಲಿಸಬೇಕು. ಇದೇ ವೇಳೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸರಿಯಾಗಿದೆಯೇ, ತಿದ್ದುಪಡಿ ಅಥವಾ ಸೇರ್ಪಡೆ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರವಿಕುಮಾರ ಜಿ.ಸಿ.ಮಾತನಾಡಿ, ಎಲ್ಲ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಮತದಾನದ ಹಕ್ಕಿನಿಂದ ವಂಚಿತರಾಗಿ, ಜವಾಬ್ದಾರಿಯುತ ಸರ್ಕಾರ ರಚಿಸುವ ಪ್ರಜಾಪ್ರಭುತ್ವದ ಅವಕಾಶವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಎಂದು ಹೇಳಿದರು.
ಅಭಿಯಾನದ ವೇಳೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತದಾನ ಜಾಗೃತಿ ಕುರಿತ ವಿವಿಧ ಘೋಷಣೆಗಳನ್ನು ಕೂಗುತ್ತ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಪಿಡಿಒ ಕೃಷ್ಣೇಗೌಡ, ನಿವೃತ್ತ ಶಿಕ್ಷಕ ಲಕ್ಕೇಗೌಡ, ಬಿಎಲ್‌ಒ ನಂದಿನಿ, ಶಿಕ್ಷಕರಾದ ಡಿ.ಎಚ್.ಗೀತಾ, ಆರ್.ಸುಬ್ಬಲಕ್ಷ್ಮೀ, ರಂಗಯ್ಯ, ಮೇಘನಾ, ಕುಮಾರ್, ಗ್ರಾಮ ಪಂಚಾಯಿತಿ ಸಿಬ್ಬಂದಿ ದಿನೇಶ್, ಹನುಮೇಶ್, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net