ಸರ್ವ ಸಮುದಾಯಕ್ಕೂ ಬೆಳಕಿನ ದಾರಿ ತೋರುವುದೇ ಧರ್ಮ- ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು

ತಾಲೂಕಿನ ಸಿಂಧುವಳ್ಳಿ ಶ್ರೀ ವೀರಭದ್ರೇಶ್ವರ ನೂತನ ದೇವಸ್ಥಾನದ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ-ಕಳಸಾರೋಹಣ ಅಂಗವಾಗಿ ಗುರುವಾರ ಆಯೋಜಿಸಿದ್ದ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು
ತಾಲೂಕಿನ ಸಿಂಧುವಳ್ಳಿ ಶ್ರೀ ವೀರಭದ್ರೇಶ್ವರ ನೂತನ ದೇವಸ್ಥಾನದ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ-ಕಳಸಾರೋಹಣ ಅಂಗವಾಗಿ ಗುರುವಾರ ಆಯೋಜಿಸಿದ್ದ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು
Published on
* ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು
* ಜನಜಾಗೃತಿ ಧರ್ಮ ಸಮಾರಂಭದಲ್ಲಿ ಆಶೀರ್ವಚನ
ಆಲೂರು : ಮನುಷ್ಯನಿಗೆ ಸಂಸ್ಕಾರ ಮತ್ತು ಉತ್ತಮ ವಿಚಾರಗಳ ಚಿಂತನೆ ಅವಶ್ಯವಾಗಿದೆ. ಇದರ ಪರಿಪಾಲನೆಯಿಂದ ಬಾಳು ಉಜ್ವಲಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ತಾಲೂಕಿನ ಸಿಂಧುವಳ್ಳಿ ಶ್ರೀ ವೀರಭದ್ರೇಶ್ವರ ನೂತನ ದೇವಸ್ಥಾನದ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ-ಕಳಸಾರೋಹಣ ಅಂಗವಾಗಿ ಗುರುವಾರ ಆಯೋಜಿಸಿದ್ದ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಹಗಲು ಸೂರ್ಯ, ರಾತ್ರಿ ಚಂದ್ರ ಬೆಳಕನ್ನು ನೀಡಬಲ್ಲರು. ಆದರೆ ಧರ್ಮ ಸರ್ವಕಾಲಕ್ಕೂ ಸರ್ವ ಸಮುದಾಯಕ್ಕೂ ಬೆಳಕಿನ ದಾರಿ ತೋರಬಲ್ಲದು. ಧರ್ಮವೆಂದರೆ ಆಡುವ ಮಾತು ಅಲ್ಲ. ಆಡಿದ ಮಾತಿನಂತೆ ನಡೆಯುವುದೇ ನಿಜವಾದ ಧರ್ಮ ಎಂದರು.
ಭಕ್ತರ ಬಾಳಿಗೆ ಆಶಾಕಿರಣವಾಗಿದೆ.
ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವೀರಶೈವ ಧರ್ಮವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಭೂಮಂಡಲದಲ್ಲಿ ಸ್ಥಾಪಿಸಿ ಸಕಲರನ್ನು ಉದ್ಧರಿಸಿದ್ದಾರೆ. ಅವರ ತತ್ವ ಸಂದೇಶಗಳು ಮತ್ತು ವಿಚಾರಧಾರೆಗಳು ಜನಾಂಗಕ್ಕೆ ದಾರಿದೀಪ. ಶ್ರೀಜಗದ್ಗುರು ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಪೂಜೆಗೊಳ್ಳುವ ಶ್ರೀ ವೀರಭದ್ರಸ್ವಾಮಿ ಸಿಂಧುವಳ್ಳಿಯಲ್ಲಿ ನೆಲೆಗೊಂಡಿರುವುದು ತಮ್ಮೆಲ್ಲರ ಸೌಭಾಗ್ಯ. ಅತ್ಯಂತ ಭವ್ಯವಾಗಿ ಸುಂದರವಾಗಿ ನಿರ್ಮಾಣಗೊಂಡ ದೇವಾಲಯ ಭಕ್ತರ ಬಾಳಿಗೆ ಆಶಾಕಿರಣವಾಗಿದೆ. ದುಷ್ಟರ ಸಂಹಾರ ಮತ್ತು ಶಿಷ್ಟರ ಸಂರಕ್ಷಣೆಗಾಗಿ ಅವತರಿಸಿದ ಶಕ್ತಿಯೇ ಶ್ರೀವೀರಭದ್ರ ಸ್ವಾಮಿ ಎಂದರು.
ಹಿಂದೂ ಸಂಸ್ಕೃತಿಯ ಆದರ್ಶ ಮೌಲ್ಯಗಳನ್ನು ಉಳಿಸಿ
ವಾಗ್ಮಿ ಹಾರಿಕಾ ಮಂಜುನಾಥ್ ಮಾತನಾಡಿ, ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಏನೆಲ್ಲ ಅಧ್ಯಾತ್ಮ ಸಂಪತ್ತು ಅಡಗಿದೆ. ಅದನ್ನು ಅರಿಯುವ ಮತ್ತು ಆಚರಣೆಯಲ್ಲಿ ತರಲು ಪ್ರಾಮಾಣಿಕ ಪ್ರಯತ್ನ ಎಲ್ಲರೂ ಮಾಡಬೇಕಾಗಿದೆ. ವೈಚಾರಿಕತೆ ಮತ್ತು ಆಧುನಿಕತೆ ಹೆಸರಿನಲ್ಲಿ ಸಂಸ್ಕೃತಿ ಸಭ್ಯತೆ ನಾಶವಾಗಬಾರದು. ಪ್ರತಿಯೊಬ್ಬರಲ್ಲಿ ಹಿಂದೂ ಸಂಸ್ಕೃತಿಯ ಆದರ್ಶ ಮೌಲ್ಯಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕೆಂದರು.
ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರಧಾರೆ ಎಂದೆಂದಿಗೂ ಆದರ್ಶ
ನೇತೃತ್ವ ವಹಿಸಿದ ಯಸಳೂರು ತೆಂಕಲಗೂಡು ಮಠದ ಶ್ರೀಚನ್ನಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲ ಧರ್ಮಗಳಲ್ಲಿ ಮಾನವೀಯ ಆದರ್ಶ ಮೌಲ್ಯಗಳು ಇರುತ್ತವೆ. ವೀರಶೈವ ಧರ್ಮದಲ್ಲಿ ಗಂಡು-ಹೆಣ್ಣು, ಮೇಲು-ಕೀಳು, ಬಡವ-ಶ್ರೀಮಂತ ಭೇದಭಾವವಿಲ್ಲದೆ ಎಲ್ಲರಿಗೂ ಸಮಾನ ಅವಕಾಶವನ್ನು ಒದಗಿಸಿಕೊಟ್ಟಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರಧಾರೆಗಳು ಎಂದೆಂದಿಗೂ ಎಲ್ಲರ ಬದುಕಿಗೆ ಆದರ್ಶ ದಾರಿ ತೋರಿಸಿದ್ದನ್ನು ಮರೆಯುವಂತಿಲ್ಲ ಎಂದರು.
ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸಿದ್ದೇಶ ನಾಗೇಂದ್ರ, ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ನವಿಲೇ ಪರಮೇಶ್ವರ, ಮಂಜಣ್ಣ, ಹರೀಶ ಇತರರು ಇದ್ದರು.
ಭವ್ಯ ಮೆರವಣಿಗೆ :
ಸಮಾರಂಭಕ್ಕೂ ಮುನ್ನ ಗ್ರಾಮದ ಹೊರವಲಯದಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಶ್ರೀಗಳನ್ನು ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಮೆರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಸುಮಂಗಲೆಯರು, ವೀರಗಾಸೆಯ ಕಲಾವಿದರು ಪಾಲ್ಗೊಂಡು ಉತ್ಸವಕ್ಕೆ ಶೋಭೆ ತಂದಿತು. ಸಮಾರಂಭದ ನಂತರ ಅನ್ನದಾಸೋಹ ಜರುಗಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net