ನಿಸ್ವಾರ್ಥ ಮತ್ತು ಅಭಿವೃದ್ಧಿಪರ ರಾಜಕಾರಣಕ್ಕೆ ರಾಜ್ಯಾದ್ಯಂತ ಖ್ಯಾತಿ ಗಳಿಸಿರುವ ಎ.ಟಿ. ರಾಮಸ್ವಾಮಿ ಅವರು ಕಲುಷಿತ ರಾಜಕಾರಣದಿಂದ ಬೇಸತ್ತು ಹಿಂದೆ ಸರಿದಿರುವುದು ತಾಲೂಕಿಗೆ ಆಗುತ್ತಿರುವ ನಷ್ಟವಾಗಿದೆ. ಅವರು ಮತ್ತೊಮ್ಮೆ ಸಕ್ರಿಯ ರಾಜಕಾರಣಕ್ಕೆ ಬರಬೇಕು ಎಂದು ಬೆಂಬಲಿಗರು ಒತ್ತಾಯಿಸಿದರು.
ತಾಲೂಕಿನ ಕೊಣನೂರಿನ ಖಾಸಗಿ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಎ.ಟಿ.ರಾಮಸ್ವಾಮಿ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಹಮ್ಮಿಕೊಂಡಿದ್ದ ಸಭೆಯಲ್ಲಿ ಮುಖಂಡ ಮಾದಾಪುರ ಕೃಷ್ಣೇಗೌಡ ಮಾತನಾಡಿ, ತಾಲೂಕಿನ ಅನೇಕ ಗ್ರಾಮಗಳಲ್ಲಿ ಹತ್ತಾರು ವರ್ಷಗಳಿಂದ ಅನುಭವದಲ್ಲಿದ್ದರೂ ಜಮೀನನ್ನು ಹಕ್ಕಿಗೆ ಪಡೆಯಲಾಗದೆ ಸಂಕಷ್ಟದಲ್ಲಿದ್ದ ನೂರಾರು ಕುಟುಂಬಗಳಿಗೆ ಬಗರ್ ಹುಕುಂನಡಿ ಆದೇಶ ಪತ್ರವನ್ನು ಅವರ ಮನೆ ಬಾಗಿಲಿಗೆ ತಲುಪಿಸಿದ ಏಕೈಕ ಶಾಸಕ ರಾಮಸ್ವಾಮಿ ಎಂದು ಬಣ್ಣಿಸಿದರು.
ತಾಲೂಕು ಸೇರಿದಂತೆ ಕೊಡಗಿನ ನೂರಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಮಹತ್ವಾಕಾಂಕ್ಷಿ ಮಲ್ಲಿಪಟ್ಟಣ ಏತನೀರಾವರಿ ಯೋಜನೆ ಅನುಷ್ಠಾನಕ್ಕೆ ತಂದಿದ್ದನ್ನು ಎಂದಿಗೂ ಮರೆಯುವಂತಿಲ್ಲ. ತಾಲೂಕಿನ ಬಹುತೇಕ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೊಳಪಡಿಸಿ ಕಾಲಕಾಲಕ್ಕೆ ರಸ್ತೆಗಳ ನಿರ್ವಹಣೆಗೆ ಅನುದಾನ ದೊರಕುವಂತೆ ಮಾಡಿದ ರಾಮಸ್ವಾಮಿ ಅವರಂತಹ ದೂರದೃಷ್ಟಿಯ ನಾಯಕರು ಸಕ್ರಿಯ ರಾಜಕಾರಣಕ್ಕೆ ಬರಬೇಕಿದೆ ಎಂದು ಇಂಗಿತ ವ್ಯಕ್ತಪಡಿಸಿದರು.
ಮುಖಂಡ ಹಂಡ್ರಂಗಿ ಚನ್ನರಾಜೇಗೌಡ ಮಾತನಾಡಿ, ಡಾಂಬರನ್ನೇ ಕಾಣದ ರಸ್ತೆಗಳು ಈಗ ಸಿಮೆಂಟ್ ರಸ್ತೆಗಳಾಗಲೂ ರಾಮಸ್ವಾಮಿ ಶ್ರಮ ಮತ್ತು ಅಭಿವೃದ್ಧಿ ರಾಜಕಾರಣದ ಧ್ಯೇಯವೇ ಕಾರಣ. ಸಾವಿರಾರು ಭಕ್ತರ ಇಷ್ಟದೈವ ಅರಸೀಕಟ್ಟೆ ಅಮ್ಮ ಕ್ಷೇತ್ರವನ್ನು ಭಕ್ತ ಸ್ನೇಹಿಯಾಗಿಸಿದ ಎಟಿಆರ್ ಮತ್ತೊಮ್ಮೆ ತಾಲೂಕಿನ ಶಾಸಕರಾಗಿ ಮಾಡಬೇಕಿದೆ. ಅವರನ್ನು ರಾಜಕಾರಣಕ್ಕೆ ಕರೆತರುವ ಒತ್ತಾಯ ನಮ್ಮೆಲ್ಲರದ್ದಾಗಿದೆ ಎಂದರು.
ಕೊಣನೂರು ಗ್ರಾಪಂ ಮಾಜಿ ಸದಸ್ಯ ತನ್ವೀರ್, ವಡವಾನಹೊಸಳ್ಳಿ ಸಿದ್ದರಾಮು, ತರಗಳಲೆ ಗ್ರಾಪಂ ಮಾಜಿ ಸದಸ್ಯ ವೀಣಾ ಪ್ರಕಾಶ್, ಹೊಡೆನೂರು ಎಚ್.ವೈ.ಗುರುರಾಜ ಮಾತನಾಡಿದರು. ಹೋಬಳಿಯ ವಿವಿಧ ಗ್ರಾಮಗಳಿಂದ ಬಂದಿದ್ದ ಅಪಾರ ಅಭಿಮಾನಿಗಳು ಜೈಕಾರ ಹಾಕುವ ಮೂಲಕ ರಾಮಸ್ವಾಮಿ ಅವರನ್ನು ಸಕ್ರಿಯ ರಾಜಕಾರಣಕ್ಕೆ ಕರೆತರುವ ವಿಷಯಕ್ಕೆ ಬೆಂಬಲ ವ್ಯಕ್ತಪಡಿಸಿದರು.