ರೈತ ಸಂಘ ಕಾರ್ಯಕರ್ತರ ಪ್ರತಿಭಟನೆ

ಬೇಲೂರು ತಾಲೂಕಿನ ಐದಳ್ಳ ಕಾವಲಿನ ಸರ್ಕಾರಿ ಭೂಮಿಯನ್ನು ಬಡ ರೈತರಿಗೆ ಹಂಚಿಕೆ ಮಾಡುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿ ಶಿರಸ್ತೇದಾರ್ ರಂಗಸ್ವಾಮಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬೇಲೂರು ತಾಲೂಕಿನ ಐದಳ್ಳ ಕಾವಲಿನ ಸರ್ಕಾರಿ ಭೂಮಿಯನ್ನು ಬಡ ರೈತರಿಗೆ ಹಂಚಿಕೆ ಮಾಡುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿ ಶಿರಸ್ತೇದಾರ್ ರಂಗಸ್ವಾಮಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Published on
ಬೇಲೂರು: ತಾಲೂಕಿನ ಹಳೇಬೀಡು ಹೋಬಳಿ ಐದಳ್ಳ ಕಾವಲಿನಲ್ಲಿರುವ 2,550 ಎಕರೆ ಸರ್ಕಾರಿ ಭೂಮಿಯನ್ನು 2021ರಿಂದಲೂ ಬಡ ಭೂರಹಿತ ರೈತರಿಗೆ ಹಂಚಿಕೆ ಮಾಡುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ತಾಲೂಕು ಕಚೇರಿಯ ಮುಂದೆ ಪ್ರತಿಭಟಿಸಿ ಶಿರಸ್ತೇದಾರ್ ರಂಗಸ್ವಾಮಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತ ಸಂಘದ ರಾಷ್ಟ್ರೀಯ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ, ತಾಲೂಕಿನ ಐದಳ್ಳ ಕಾವಲಿನ ಭೂಮಿ ಸರ್ಕಾರದ ಸ್ವತ್ತಾಗಿದೆ. ಈ ಭೂಮಿಯನ್ನು ಅರ್ಹ ರೈತರಿಗೆ ಕೃಷಿಗಾಗಿ ಹಂಚಿಕೆ ಮಾಡಬೇಕೆಂಬುದು ನಮ್ಮ ರೈತರ ಬೇಡಿಕೆಯಾಗಿದೆ. ಆದರೆ, ಅರಣ್ಯ ಇಲಾಖೆಯವರು ಪದೇ ಪದೆ ಜೆಸಿಬಿ ಯಂತ್ರಗಳನ್ನು ತಂದು ಚರಂಡಿ ತೆಗೆದು ಭೂಮಿಯನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆಂದು ರೈತರು ಆರೋಪಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮಧ್ಯರಾತ್ರಿ ಅರಣ್ಯ ಇಲಾಖೆಯವರು ಜೆಸಿಬಿ ಯಂತ್ರವನ್ನು ತಂದು ಕೆಲಸ ಪ್ರಾರಂಭಿಸುತ್ತಿದ್ದಂತೆ ಮಾಹಿತಿ ಪಡೆದ ರೈತರು ಸ್ಥಳಕ್ಕೆ ತೆರಳಿ ಕೆಲಸ ನಿಲ್ಲಿಸಿ ಸ್ಥಳದಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ಹೇಳಿದರು.
ಸರ್ಕಾರಿ ಭೂಮಿಯನ್ನು ರೈತರಿಗೆ ಮಾತ್ರ ಹಂಚಿಕೆ ಮಾಡಬೇಕು. ಅರಣ್ಯ ಇಲಾಖೆ ಸುಪರ್ದಿಗೆ ನೀಡಲು ಅವಕಾಶ ನೀಡುವುದಿಲ್ಲ. ಅಲ್ಲದೆ, ಈ ಭೂಮಿಗೆ ಸಂಬಂಧಿಸಿದಂತೆ ರಾಷ್ಟ್ರಪತಿ ಆದೇಶ ಹಾಗೂ 1961ರ ನಿಯಮಾವಳಿಗಳ ಪ್ರಕಾರ ಭೂರಹಿತ 875 ರೈತರಿಗೆ ಭೂಮಿ ಹಂಚಿಕೆ ಮಾಡಬೇಕೆಂದಿದ್ದು, ಸರ್ಕಾರ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿ ರೈತರು 5000 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದೇವೆ. ಜತೆಗೆ ರಾಜ್ಯದ ತುಮಕೂರು, ಚಿತ್ರದುರ್ಗ, ದಾವಣಗೆರೆ, ಮೈಸೂರು, ಹಾಸನ, ಚಿಕ್ಕಮಗಳೂರು ಹಾಗೂ ಕೋಲಾರ ಜಿಲ್ಲೆಗಳಿಗೂ ಇದೇ ರೀತಿಯ ಸಮಸ್ಯೆ ವ್ಯಾಪಿಸಿದ್ದು, ವಿವಿಧ ಜಿಲ್ಲೆಗಳ ರೈತರ ಪಟ್ಟಿ ಸಿದ್ಧಪಡಿಸಿ ಸಂಬಂಧಿತ ಅಧಿಕಾರಿಗಳ ಸಮ್ಮುಖದಲ್ಲಿ ಸರ್ವೇ ನಡೆಸಿ ಅರ್ಹರಿಗೆ ಭೂಮಿ ಹಸ್ತಾಂತರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಆದರೂ ಅರಣ್ಯ ಇಲಾಖೆಯವರು ಈ ಭೂಮಿಗೆ ಪ್ರವೇಶಿಸಲು ಯತ್ನಿಸಿದರೆ ಬೇಲೂರು ಪಟ್ಟಣದಲ್ಲಿ ಚಿಕ್ಕಮಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಅನಿರ್ದಿಷ್ಟಾವಧಿವರೆಗೆ ಬಂದ್ ಮಾಡಿ ನಮ್ಮ ಹಕ್ಕು ಸಿಗುವವರೆಗೂ ಹೋರಾಟ ಮುಂದುವರಿಸಬೇಕಾಗುತ್ತದೆ. ಭೂಮಿ ಹಂಚಿಕೆ ಅಧಿಕಾರ ಕಂದಾಯ ಇಲಾಖೆಗೆ ಸೇರಿದ್ದು, ಅರಣ್ಯ ಇಲಾಖೆಯವರ ಹೇಳಿಕೆಗಳು ಜನರನ್ನು ದಾರಿ ತಪ್ಪಿಸುತ್ತಿವೆ ಎಂದರು.
ರೈತ ಸಂಘದ ಮುಖಂಡರಾದ ಮಾಮ ದಸ್ತಗಿರಿ, ಏಜಾಸ್ ಪಾಷ, ಅಯೂಬ್ ಪಾಷ, ನಂಜಮ್ಮ, ವೆಂಕಟೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net