ಕೆಪಿಎಸ್ ಶಾಲೆಗೆ ಮೂಲಸೌಕರ್ಯ ಒದಗಿಸಿ

ಚನ್ನರಾಯಪಟ್ಟಣದಲ್ಲಿ ಎವನ್ ಪ್ಲಾಸ್ಟಿಕ್  ಪ್ರೈವೇಟ್ ಸಂಸ್ಥೆಯ ಸಿಎಸ್‌ಆರ್ ಅನುದಾನದಡಿ ನೀಡಿದ್ದ ಉಚಿತ ಬ್ಯಾಗಳನ್ನು ಶಾಸಕ ಸಿ.ಎನ್. ಬಾಲಕೃಷ್ಣ ವಿತರಿಸಿದರು. ಎಚ್.ಎನ್.ದೀಪಾ, ಗೌತಮ್, ಕೆ.ಎನ್ ಅನಿಲ್, ವಿ.ಜಿ.ದ್ಯಾವೇಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.
ಚನ್ನರಾಯಪಟ್ಟಣದಲ್ಲಿ ಎವನ್ ಪ್ಲಾಸ್ಟಿಕ್ ಪ್ರೈವೇಟ್ ಸಂಸ್ಥೆಯ ಸಿಎಸ್‌ಆರ್ ಅನುದಾನದಡಿ ನೀಡಿದ್ದ ಉಚಿತ ಬ್ಯಾಗಳನ್ನು ಶಾಸಕ ಸಿ.ಎನ್. ಬಾಲಕೃಷ್ಣ ವಿತರಿಸಿದರು. ಎಚ್.ಎನ್.ದೀಪಾ, ಗೌತಮ್, ಕೆ.ಎನ್ ಅನಿಲ್, ವಿ.ಜಿ.ದ್ಯಾವೇಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಒತ್ತಾಯ
ಚನ್ನರಾಯಪಟ್ಟಣ : ತಾಲೂಕಿಗೆ ಮಂಜೂರಾಗಿರುವ ಕೆಪಿಎಸ್ ಶಾಲೆಯನ್ನು ಪ್ರಾರಂಭಿಸಲು ಮೂಲಸೌಕರ್ಯಗಳನ್ನು ಒದಗಿಸಬೇಕೆಂದು ಶಾಸಕ ಸಿ.ಎನ್.ಬಾಲಕೃಷ್ಣ ಒತ್ತಾಯಿಸಿದರು.
ಪಟ್ಟಣದ ಮಾಧ್ಯಮಿಕ ಶಾಲಾ ಅವರಣದಲ್ಲಿ ಶನಿವಾರ ಎವನ್ ಪ್ಲಾಸ್ಟಿಕ್ ಸಂಸ್ಥೆ ತಾಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಂಸ್ಥೆಯ ಸಿಎಸ್‌ಆರ್ ಅನುದಾನದಡಿ ನೀಡುತ್ತಿರುವ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನ ಬಾಗೂರು ಹಾಗೂ ಶ್ರಾವಣಬೆಳಗೊಳಕ್ಕೆ ಕೆಪಿಎಸ್ ಶಾಲೆ ಮಂಜುರಾಗಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಯಾವುದೇ ಅನುದಾನಗಳು ಬಿಡುಗಡೆಯಾಗದಿರುವುದರಿಂದ ಎರಡು ಶಾಲೆಗಳಿಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಶಾಲೆ ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಮುಂದಿನ ಶೈಕ್ಷಣಿಕ ವರ್ಷಕ್ಕೆ ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಯಿಂದ 15ನೇ ಹಣಕಾಸು ಯೋಜನೆಯಲ್ಲಿ ಒಂದೊಂದು ಶಾಲೆಗಳನ್ನು ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದ್ದು, ಶಾಲಾ ಶಿಕ್ಷಣ ಇಲಾಖೆಯ ಆಡಳಿತಾಧಿಕಾರಿಗಳು ತಾಲೂಕಿನಲ್ಲಿರುವ ಶಾಲೆಗಳ ಅಗತ್ಯ ಕಾಮಗಾರಿಗಳ ಬಗ್ಗೆ ಪಟ್ಟಿ ಸಲ್ಲಿಸಿದರೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
ಬಾಗೂರು ಶಾಲೆಗೆ ಅತಿ ಅವಶ್ಯವಾಗಿ ಶೌಚಗೃಹದ ಅವಶ್ಯಕತೆ ಇದ್ದು ಕೆಪಿಎಸ್ ಶಾಲೆಯ ಅನುದಾನದಲ್ಲಿ ಹೈಟೆಕ್ ಶೌಚಗೃಹ ನಿರ್ಮಿಸಲಾಗುವುದು ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿದ್ದು ಫಲಿತಾಂಶ ಸುಧಾರಣೆಗೆ ಈಗಿನಿಂದಲೇ ಎಲ್ಲ ಶಿಕ್ಷಕರು ಹಾಗೂ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಕ್ರಮವಹಿಸಬೇಕು. ವಿಷಯವಾರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ನಿರ್ದಿಷ್ಟ ಕಲಿಕಾಂಶಗಳ ಪ್ರಗತಿಗೆ ಶ್ರಮಿಸಬೇಕು. ಎಲ್ಲ ವಿಷಯ ಶಿಕ್ಷಕರು ಶಾಲಾ ಹಂತದಲ್ಲಿ ಮಕ್ಕಳ ಕಲಿಕಾ ಕೊರತೆ ಗುರುತಿಸಿ ಪ್ರಗತಿಗೆ ಪ್ರತಿದಿನ ಚಟುವಟಿಕೆ ರೂಪಿಸಿ, ಕಲಿಕಾ ಪ್ರಗತಿಯಾಗುವಂತೆ ಶ್ರಮವಹಿಸಬೇಕು ಎಂದು ಸೂಚಿಸಿದರು.
ಎವನ್ ಪ್ಲಾಸ್ಟಿಕ್ ಸಂಸ್ಥೆಯವರು ಪ್ರಸಕ್ತ ವರ್ಷದ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ 6000 ಬ್ಯಾಗ್‌ಗಳನ್ನು ವಿತರಿಸಿದ್ದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನಲ್ಲಿರುವ ಪ್ರೌಢಶಾಲಾ ಮಕ್ಕಳಿಗೆ ಮುಂದಿನ ಆರ್ಥಿಕ ವರ್ಷ ಉಚಿತ ಬ್ಯಾಗ್‌ಗಳನ್ನು ನೀಡಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ದೀಪಾ, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಕೆ.ಎನ್.ಅನಿಲ್ , ಎವನ್ ಪ್ಲಾಸ್ಟಿಕ್ ಇಂಡಸ್ಟ್ರೀಸ್ ನ ವ್ಯವಸ್ಥಾಪಕ ಗೌತಮ್, ರಮೇಶ್, ಲೋಕೇಶ್, ಸರಬರಾಜುದಾರ ಮಧುಶೆಟ್ಟಿ, ಟಿಎಪಿಸಿಎಂಎಸ್‌ನ ಅಧ್ಯಕ್ಷ ವೆಂಕಟೇಶಮೂರ್ತಿ, ತಾಲೂಕಿನ ಶಾಲೆಗಳ ಮುಖ್ಯಸ್ಥರು ಹಾಗೂ ಶಿಕ್ಷಕ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net